Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಹಿರಿಯರೀರ್ವರ ಆರೋಗ್ಯ ವಿಚಾರಿಸಿದ ಸಚಿವ ಕೋಟ

ಹಿರಿಯರೀರ್ವರ ಆರೋಗ್ಯ ವಿಚಾರಿಸಿದ ಸಚಿವ ಕೋಟ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 25

ಹಿರಿಯರೀರ್ವರ ಆರೋಗ್ಯ ವಿಚಾರಿಸಿದ ಸಚಿವ ಕೋಟ
ಕೋಟ: ಜನಸಂಘದ ಕಾಲದಿಂದಲೂ ಬಿಜೆಪಿಯ ಸೈದ್ಧಾಂತಿಕ ವಿಚಾರಗಳಿಗೋಸ್ಕರ ದುಡಿಯುತ್ತಿದ್ದು, ಇದೀಗ ವೃದ್ಧಾಪ್ಯದ ಅಂಚಿನಲ್ಲಿರುವ ಬಿಜೆಪಿ ಹಿರಿಯ ಕಾರ್ಯಕರ್ತರಾದ ಚೇರ್ಕಾಡಿ ಕುಶಲ ಶೆಟ್ಟಿ ಮತ್ತು ಕೊಕ್ಕರ್ಣೆ ಹಳ್ಳಿ ಶ್ರೀಧರ ಶೆಟ್ಟಿ ಮನೆಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ, ಹಿರಿಯರೀರ್ವರ ಆರೋಗ್ಯ ವಿಚಾರಿಸಿದರು.

ತೀವ್ರ ಅನಾರೋಗ್ಯ ಪೀಡಿತರಾಗಿದ್ದು, ಊರುಗೋಲಿನ ಸಹಾಯದಿಂದ ನಡೆಯುತ್ತಿರುವ ಚೇರ್ಕಾಡಿ ಕುಶಲ ಶೆಟ್ಟಿ ತಮ್ಮ ಪರಿಶ್ರಮದಿಂದ ಅಧಿಕಾರವಿಲ್ಲದ ಸಮಯದಲ್ಲೂ ವಾಜಪೇಯಿ ನಗರ ಎಂದು ವಸತಿ ನಿವೇಶನಕ್ಕೆ ನಾಮಕರಣ ಮಾಡಲು ಶ್ರಮಿಸಿದ್ದರು ಮಾತ್ರವಲ್ಲ, ಅಟಲ್ ಜಿ ಅನಾರೋಗ್ಯ ಪೀಡಿತರಾಗಿದ್ದ ದಿನಗಳಲ್ಲಿ ಅವರ ಅಂಗಾಂಗ ಕಸಿಗೆ ತಾನು ತನ್ನ ಅಂಗಾಂಗ ದಾನ ಮಾಡಲು ಸಿದ್ಧನಿದ್ದೇನೆ ಎಂಬ ಸಂದೇಶ ನೀಡಿದ್ದರು. ಇಂದೂ ಸಹ ಕುಶಲ ಶೆಟ್ಟಿಯವರು ಅಟಲ್ ಪುಣ್ಯದಿನದಂದು ಉಪವಾಸ ಆಚರಿಸುತ್ತಾರೆ.

ಕೊಕ್ಕರ್ಣೆ ಹಳ್ಳಿ ಶ್ರೀಧರ ಶೆಟ್ಟಿ ಅವರಿಗೆ 90 ವರ್ಷ ಮೀರಿದ್ದು, ಕಿವಿ ಕೇಳಿಸುತ್ತಿಲ್ಲವಾದರೂ ಇಂದಿಗೂ ಬಿಜೆಪಿ ಒಳಿತನ್ನು ಹಾರೈಸಿ ಬದುಕುತ್ತಿದ್ದು, ತನ್ನ ಹಿಂದಿನ ದಿನಗಳನ್ನು ಜನಸಂಘ ಮತ್ತು ಬಿಜೆಪಿಯ ಜನಪರ ಹೋರಾಟಕ್ಕೆ ಮೀಸಲಿರಿಸಿದ್ದರು. ಇಂಥ ಹಿರಿಯರ ಪರಿಶ್ರಮದ ದುಡಿಮೆಯಿಂದಲೇ ಇಂದಿನ ದಿನಗಳಲ್ಲಿ ಬಿಜೆಪಿ ದೇಶ ಆಳಲು ಸಾಧ್ಯವಾಯಿತು ಎಂದು ತಿಳಿಸಿದ ಸಚಿವ ಕೋಟ, ಇಬ್ಬರು ಹಿರಿಯರನ್ನು ಮನೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಚೇರ್ಕಾಡಿ ಗ್ರಾಮದ ಬಿಜೆಪಿ ಪ್ರಮುಖ ಕಮಲಾಕ್ಷ ಹೆಬ್ಬಾರ್, ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಭಟ್, ಉಪಾಧ್ಯಕ್ಷ ಕಿಟ್ಟಪ್ಪ ಅಮೀನ್, ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಲಾಲ್, ಸಚಿನ್ ಪೂಜಾರಿ, ಕಾರ್ಯದರ್ಶಿ ಪೇತ್ರಿ ಸುರೇಶ್ ಪೂಜಾರಿ, ಪ್ರಮುಖರಾದ ರಾಧಾಕೃಷ್ಣ ಸಾಮಂತ್, ಶ್ಯಾಮ್ ಪ್ರಸಾದ್ ಭಟ್, ರಾಜು ಮಡಿವಾಳ, ನವೀನ್ ಶೆಟ್ಟಿ ಮುಂತಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!