ಸುದ್ದಿಕಿರಣ ವರದಿ
ಶನಿವಾರ, ಜೂನ್ 18
ಯಶಪಾಲ್, ಮುತಾಲಿಕಗೆ ಕೊಲೆ ಬೆದರಿಕೆಯೊಡ್ಡಿದ ಆರೋಪಿ ಸೆರೆ
ಉಡುಪಿ: ಹಿಂದುತ್ಜ ಪರ ಹೋರಾಟಗಾರ ಪ್ರಮೋದ್ ಮುತಾಲಿಕ್ ಹಾಗೂ ಬಿಜೆಪಿ ನಾಯಕ ಯಶಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಪದೇ ಪದೇ ಕೊಲೆ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ದ.ಕ. ಜಿಲ್ಲೆಯ ಬಜ್ಪೆ ನಿವಾಸಿ ಮಹಮ್ಮದ್ ಶಫಿ ಎಂದು ಗುರುತಿಸಲಾಗಿದೆ.
ಮಾರಿಗುಡಿ ಪೇಜ್ ಎಂಬ ಇನ್ ಸ್ಟ್ರಾಗ್ರಾಂ ಖಾತೆ ಮೂಲಕ ಆತ ಯಶಪಾಲ್ ಸುವರ್ಣ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಬಂಧಿತ ಆರೋಪಿ ಶಫಿ ಸುರತ್ಕಲ್ ಭಾಗದಲ್ಲಿ ಲಾಜೆಸ್ಟಿಕ್ ನಲ್ಲಿ ಲಾರಿಗಳ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಆತನ ಐಪಿ ವಿಳಾಸ ಮೂಲಕ ಬಂಧಿಸುವಲ್ಲಿ ಕಾಪು ಠಾಣಾಧಿಕಾರಿ ಶ್ರೀಶೈಲ ಆರ್. ಮುರಗೋಡ ಮತ್ತವರ ತಂಡ ಯಶಸ್ವಿಯಾಗಿದೆ. ಆತನ ಜೊತೆಗೆ ಇನ್ನೋರ್ವ ಆರೋಪಿ ಮಹಮ್ಮದ್ ಆಸಿಫ್ ಅಲಿಯಾಸ್ ಆಶಿಕ್ ಎಂಬಾತನೂ ಕೈಜೋಡಿಸಿದ್ದು, ಆತ ದುಬೈನಲ್ಲಿ ನೆಲೆಸಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಡುಪಿಯ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಹಾಗೂ ಬಿಜೆಪಿ ಹಿಂದುಳಿದ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಬೆದರಿಕೆ ಹಾಕಿದ್ದು, ಆರೋಪಿಗಳ ಬಂಧನಕ್ಕೆ ವಿವಿಧ ಸಂಘಟನೆಗಳಿಂದ ಪೊಲೀಸರಿಗೆ ಪ್ರತ್ಯೇಕ ದೂರು ನೀಡಲಾಗಿತ್ತು.