Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಡಿಕೆಶಿ, ಸಿದ್ಧರಾಮಯ್ಯ ಆಲಿಂಗನ ಸಹಜವಲ್ಲ

ಡಿಕೆಶಿ, ಸಿದ್ಧರಾಮಯ್ಯ ಆಲಿಂಗನ ಸಹಜವಲ್ಲ

ಸುದ್ದಿಕಿರಣ ವರದಿ
ಶನಿವಾರ, ಆಗಸ್ಟ್ 6

ಡಿಕೆಶಿ, ಸಿದ್ಧರಾಮಯ್ಯ ಆಲಿಂಗನ ಸಹಜವಲ್ಲ
ಉಡುಪಿ: ಈಚೆಗೆ ದಾವಣಗೆರೆಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಹುಟ್ಟುಹಬ್ಬದ ಅಮೃತ ಮಹೋತ್ಸವ ಸಂದರ್ಭದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ನಡುವಿನ ಆಲಿಂಗನ ಸಹಜವಾಗಿ ನಡೆದಿಲ್ಲ. ಯಾರದೋ ಬಲಾತ್ಕಾರಕ್ಕೆ ನಡೆದುದು ಎಂಬುದು ಗೊತ್ತಾಗಿದೆ. ಈ ರೀತಿ ನಡೆದ ಆಲಿಂಗನದ ಪ್ರೀತಿ ಯಾವಾಗ ಡೈವೋರ್ಸ್ ಆಗುತ್ತದೆಯೋ ನೋಡಬೇಕಷ್ಟೆ ಎಂದು ಸಚಿವ ವಿ. ಸುನಿಲ್ ಕುಮಾರ್ ವ್ಯಂಗ್ಯವಾಡಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲಾತ್ಕಾರದ ಆಲಿಂಗನದ ಸವಿ ಹೆಚ್ಚು ಕಾಲ ಬಾಳುವುದಿಲ್ಲ ಎಂದರು.

ಸ್ಥಳೀಯಾಡಳಿತ ಸಂಸ್ಥೆಗಳ ಮೀಸಲಾತಿ ಬಗ್ಗೆ ಜಮೀರ್ ಆಕ್ಷೇಪ ಕುರಿತು ಪ್ರತಿಕ್ರಿಯಿಸಿದ ಸಚಿವ ಸುನಿಲ್, ಈ ಬಗ್ಗೆ ಬಿಜೆಪಿ ಆಕ್ಷೇಪ ಸಲ್ಲಿಸಿದೆ. ಸಾರ್ವಜನಿಕ ಆಕ್ಷೇಪವಿದ್ದಲ್ಲಿ ಸಲ್ಲಿಸಬಹುದು. ಆ ಬಳಿಕವೇ ಚುನಾವಣಾ ಆಯೋಗ ಮೀಸಲಾತಿ ಘೋಷಣೆ ಮಾಡಲಿದೆ ಎಂದರು.

ಶೀಘ್ರ ಬಂಧನ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ತನಿಖೆಗೆ ಪೊಲೀಸ್ ಇಲಾಖೆಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನೈಜ ಆರೋಪಿಗಳನ್ನು ಇನ್ನೊಂದೆರಡು ದಿನಗಳಲ್ಲಿ ಬಂಧಿಸುವ ವಿಶ್ವಾಸವಿದೆ ಎಂದರು.

ಪ್ರತ್ಯೇಕ ಪ್ಯಾಕೇಜ್
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ಉಂಟಾಗಿರುವ ಹಾನಿ ಪರಿಹಾರ ಕುರಿತು ಈಗಾಗಲೇ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಈಗಾಗಲೇ ಮಳೆ ಹಾನಿ ಬಗ್ಗೆ ಮುಖ್ಯಮಂತ್ರಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ.

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಪ್ಯಾಕೇಜ್ ನೀಡಬೇಕೆಂಬುದು ನಮ್ಮ ಆಗ್ರಹವಾಗಿದ್ದು, ಅದಕ್ಕೆ ಸಿಎಂ ಸಮ್ಮತಿಸಿದ್ದಾರೆ.

ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಬಳಿಕ ಸಭೆ ಕರೆದು ಆ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!