Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಆಗಸ್ಟ್ 13ರಿಂದ 15: ಹರ್ ಘರ್ ತಿರಂಗಾ

ಆಗಸ್ಟ್ 13ರಿಂದ 15: ಹರ್ ಘರ್ ತಿರಂಗಾ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 22

ಆಗಸ್ಟ್ 13ರಿಂದ 15: ಹರ್ ಘರ್ ತಿರಂಗಾ
ಉಡುಪಿ: ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ರಾಷ್ಟ್ರಪ್ರೇಮ ಮತ್ತು ದೇಶಭಕ್ತಿಯ ಗೌರವವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತೀ ಮನೆಯಲ್ಲೂ ತ್ರಿವರ್ಣ ಧ್ವಜ (ಹರ್ ಘರ್ ತಿರಂಗಾ) ಅಭಿಯಾನ ಆಗಸ್ಟ್ 13ರಿಂದ 15ರ ವರೆಗೆ ಆಯೋಜಿಸಲಾಗುತ್ತಿದ್ದು, ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದರು.

ಜಿಲ್ಲೆಯ ಪ್ರತೀ ಮನೆಗಳಲ್ಲೂ ತ್ರಿವರ್ಣ ಧ್ವಜ ಅಭಿಯಾನ ಆಯೋಜಿಸುವ ಕುರಿತಂತೆ ಶುಕ್ರವಾರ ಜಿ. ಪಂ. ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆ. 13ರಿಂದ ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲಾ ಮನೆಗಳು, ಸರಕಾರಿ ಕಟ್ಟಡಗಳು, ಬಹುಮಹಡಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು, ಕೈಗಾರಿಕೆಗಳು, ಸಂಘಸಂಸ್ಥೆಗಳು, ವಸತಿ ಸಮುಚ್ಛಯಗಳು ಸೇರಿದಂತೆ ಎಲ್ಲಾ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಕುರಿತಂತೆ ಜಾಗೃತಿ ಮೂಡಿಸಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ನೌಕರರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ
ಸಂಘಗಳ ಪ್ರತಿನಿಧಿಗಳ ಮೂಲಕ ಪ್ರಚಾರ ಅಭಿಯಾನ ನಡೆಸುವಂತೆ ಸೂಚನೆ ನೀಡಿದರು.

ಪ್ರಚಾರ ನೀಡಿ
ಜಿಲ್ಲೆಯ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವಂತೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತಂತೆ ಅವರ ಪೋಷಕರಿಗೆ ವಿದ್ಯಾರ್ಥಿಗಳ ಮೂಲಕ ಪತ್ರ ಬರೆಸುವ ಕಾರ್ಯಕ್ರಮ ಆಯೋಜಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲಾ ಸರಕಾರಿ ವಾಹನಗಳು ಮತ್ತು ಸಾರ್ವಜನಿಕ ಸಾರಿಗೆ ವಾಹನಗಳ ಮೇಲೆ ಅಭಿಯಾನ ಕುರಿತು ಸ್ಟಿಕರ್ ಅಳವಡಿಸುವಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಕರಪತ್ರಗಳ ಮೂಲಕ ಪ್ರಚುರಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಧ್ವಜ ಕೊರತೆಯಾಗದಂತೆ ಕ್ರಮ ವಹಿಸಿ
ಎಲ್ಲಾ ನಗರ ಸ್ಥಳಿಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಧ್ವಜಗಳ ಕೊರತೆಯಾಗದಂತೆ ವರ್ತಕರಿಗೆ ತಮ್ಮ ಅಂಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯ ಧ್ವಜಗಳ ದಾಸ್ತಾನು ಹೊಂದಿರುವ ಕುರಿತು ಮಾಹಿತಿ ನೀಡಬೇಕು.

ಜಿಲ್ಲೆಯ ಎಲ್ಲಾ ಪಡಿತರ ಅಂಗಡಿಗಳಲ್ಲಿಯೂ ಧ್ವಜಗಳ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು.

ಯುವಕ ಸಂಘಗಳು, ಸ್ವಸಹಾಯ ಸಂಘಗಳು ಸೇರಿದಂತೆ ಎಲ್ಲಾ ಸಂಘಸಂಸ್ಥೆಗಳಿಗೆ ಅಭಿಯಾನದ ಬಗ್ಗೆ ಮಾಹಿತಿ ನೀಡಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು.

ಜಿಲ್ಲೆಯ ಪ್ರಮುಖ ಸಾಹಿತಿಗಳು, ಕಲಾವಿದರು, ಕ್ರೀಡಾಪಟುಗಳು ಹಾಗೂ ಧಾರ್ಮಿಕ ಮುಖಂಡರ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಗ್ಗೆ ಹೇಳಿಕೆ ಪಡೆದು ಪ್ರಚಾರ ಮಾಡಬೇಕು ಎಂದರು.

4 ಲಕ್ಷ ಧ್ವಜಗಳ ಹಾರಾಟ
ಉಡುಪಿ ಜಿಲ್ಲೆಯಲ್ಲಿ 2.80 ಲಕ್ಷ ಮನೆಗಳು ಮತ್ತು ಅಂದಾಜು 1.20 ಲಕ್ಷ ಇತರ ಕಟ್ಟಡಗಳಿದ್ದು ಒಟ್ಟು 4 ಲಕ್ಷಕ್ಕೂ ಅಧಿಕ ಧ್ವಜಗಳನ್ನು ಹಾರಿಸುವ ಉದ್ದೇಶವಿದ್ದು, ಧ್ವಜ ಸಂಹಿತೆ ಮತ್ತು ಗೌರವ ಕಾಪಾಡಿಕೊಂಡು ಧ್ವಜ ಹಾರಿಸುವ ಕುರಿತಂತೆ ನೀಡಿರುವ ಅಗತ್ಯ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಡಿಸಿ ತಿಳಿಸಿದರು.

ಜಿ.ಪಂ. ಸಿಇಓ ಪ್ರಸನ್ನ ಎಚ್. ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!