Thursday, December 2, 2021
Home ಸಮಾಚಾರ ಜಿಲ್ಲಾ ಸುದ್ದಿ ಆ. 18. 19: ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆ

ಆ. 18. 19: ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆ

ಆ. 18. 19: ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆ

(ಸುದ್ದಿಕಿರಣ ವರದಿ)
ಉಡುಪಿ: ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಆಶಯದಂತೆ ದೇಶಾದ್ಯಂತ ಕೇಂದ್ರ ಸಚಿವರ ನೇತೃತ್ವದಲ್ಲಿ ನೂತನ ಕೇಂದ್ರ ಸಚಿವರನ್ನು ಪರಿಚಯಿಸುವ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಪ್ರಚಲಿತಗೊಳಿಸುವ ಜನಾಶೀರ್ವಾದ ಯಾತ್ರೆ ಸೋಮವಾರ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಈ ತಿಂಗಳ 18 ಮತ್ತು 19ರಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಾದ್ಯಂತ ನಾಲ್ಕು ಮಂದಿ ಕೇಂದ್ರ ಸಚಿವರ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ಆರಂಭಗೊಂಡಿದೆ. ಶೋಭಾ ಕರಂದ್ಲಾಜೆ ಅವರು ಮೈಸೂರಿನಲ್ಲಿ ಯಾತ್ರೆಗೆ ಚಾಲನೆ ನೀಡಿದ್ದು ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಯಾತ್ರೆ ಪೂರೈಸಿ ಆ. 18ರಂದು ಉಡುಪಿ ಜಿಲ್ಲೆಗೆ ಆಗಮಿಸುವರು.

ಅಂದು ಸಂಜೆ 6.30ಕ್ಕೆ ಹೆಬ್ರಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಜನಾಶೀರ್ವಾದ ಯಾತ್ರೆಯನ್ನು ಸ್ವಾಗತಿಸಲಾಗುವುದು.

ಬಳಿಕ ಹೆಬ್ರಿ, ಹಿರಿಯಡ್ಕಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾತ್ರಿ 9.30ಕ್ಕೆ ಜಿಲ್ಲಾ ಬಿಜೆಪಿ ಕಚೇರಿಗೆ ಸಚಿವೆ ಶೋಭಾ ಭೇಟಿ ನೀಡಿ ಪಕ್ಷ ವರಿಷ್ಠರೊಂದಿಗೆ ಚರ್ಚಿಸುವರು.

ಆ. 19ರಂದು ಬೆಳಿಗ್ಗೆ ಕೃಷ್ಣಮಠ ಭೇಟಿ ನೀಡುವರು. 11 ಗಂಟೆಗೆ ಪುರಭವನದಲ್ಲಿ ಜನಾಶೀರ್ವಾದ ಯಾತ್ರೆ ಸಮಾವೇಶ ಮತ್ತು ಸಮಾರೋಪ ನಡೆಯಲಿದೆ.

ಈ ಸಂದರ್ಭದಲ್ಲಿ ಸಚಿವೆ ಶೋಭಾ ಅವರನ್ನು ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನಿಲ್ ಕುಮಾರ್, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸುವರು.

ಬಳಿಕ ಕೇಂದ್ರದ ಯೋಜನೆಗಳಾದ ಆಯುಷ್ಮಾನ್, ರೈತ ಸಂಮಾನ್, ಉಜ್ವಲ, ಸುಕನ್ಯ ಸಮೃದ್ಧಿ ಯೋಜನೆಯ ಫಲಾನುಭವಿಗಳೊಂದಿಗೆ ಮಧ್ಯಾಹ್ನದ ಭೋಜನ ಸ್ವೀಕರಿಸುವರು.

ಬಳಿಕ ಉಡುಪಿ ಅಲಂಕಾರ್ ಥಿಯೇಟರ್ ಬಳಿಯ ಲಸಿಕೆ ಕೇಂದ್ರ ಭೇಟಿ, ಬ್ರಹ್ಮಾವರದಲ್ಲಿ ಪಡಿತರ ಅಂಗಡಿ ಭೇಟಿ ನೀಡಿ, ಬ್ರಹ್ಮಾವರ ಸರಕಾರಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿರುವ ಆಮ್ಲಜನಕ ಘಟಕ ಉದ್ಘಾಟಿಸುವರು ಎಂದು ಕುಯಿಲಾಡಿ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!