Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಇ-ಅದಾಲತ್: 1,784 ಪ್ರಕರಣ ಇತ್ಯರ್ಥ

ಇ-ಅದಾಲತ್: 1,784 ಪ್ರಕರಣ ಇತ್ಯರ್ಥ

ಉಡುಪಿ: ಕೊರೊನಾ ಸಂದಿಗ್ಧತೆಯ ನಡುವೆಯೂ ಇ- ಅದಾಲತ್ ನಂಥ ಕಾರ್ಯಕ್ರಮ ಆಯೋಜಿಸುವ ಮೂಲಕ ನ್ಯಾಯಾಲಯಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಅಶೋಕ್ ಕಿನಗಿ ಹೇಳಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆವರಣದಲ್ಲಿ 27 ಲಕ್ಷ ರೂ. ವೆಚ್ಚದಲ್ಲಿ ಇಂಟರ್ ಲಾಕ್ನಿಂದ ಅಳವಡಿಸಲಾದ ನೂತನ ಕಾರ್ ಪಾರ್ಕಿಂಗ್ ಪ್ರದೇಶ ಉದ್ಘಾಟಿಸಿ ಮಾತನಾಡಿದರು.

ಸೆಪ್ಟಂಬರ್ ತಿಂಗಳಲ್ಲಿ ನಡೆದ ಇ- ಲೋಕ ಅದಾಲತ್ ನಲ್ಲಿ ಉಡುಪಿ ಜಿಲ್ಲೆಯಲ್ಲಿ 1,784 ಪ್ರಕರಣ ಇತ್ಯರ್ಥಪಡಿಸಲಾಗಿದೆ. ವಕೀಲರು, ಅಭಿಯೋಜಕರು, ವಿಮಾ ಸಂಸ್ಥೆ ಸಹಯೋಗದಿಂದ ಇದು ಸಾಧ್ಯವಾಗಿದೆ ಎಂದರು.

ನ್ಯಾಯಾಲಯದಲ್ಲಿ ಅಕ್ಟೋಬರ್ ನಲ್ಲಿ 553 ಸಿವಿಲ್, 1,088 ಕ್ರಿಮಿನಲ್ ಮತ್ತು ನವೆಂಬರ್ ನಲ್ಲಿ 2,124 ಪ್ರಕರಣ ವಿಲೇವಾರಿ ಮಾಡಲಾಗಿದೆ. 390 ಸಾಕ್ಷ್ಯ ಹೇಳಿಕೆ ಪಡೆಯಲಾಗಿದೆ. ಕೊರೊನಾ ಸಂದಿಗ್ಧತೆಯಲ್ಲಿಯೂ ಕೇಸುಗಳನ್ನು ವಿಳಂಬ ಮಾಡದೇ ಕಾರ್ಯನಿರ್ವಹಿಸಿರುವುದನ್ನು ಶ್ಲಾಘಿಸಿದ ಅವರು ನ್ಯಾಯಾಧೀಶರು, ಅಭಿಯೋಜಕರು, ವಕೀಲರ ಸಹಕಾರ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು.

ವಕೀಲರ ಸಂಘದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಬದ್ಧ ಎಂದು ಭರವಸೆ ನೀಡಿದರು.

ಪ್ರಾಧಿಕಾರದಿಂದ ಡಿ.ಪಿ.ಆರ್.ಗೆ 1 ಕೋ. ರೂ.
ಅಭ್ಯಾಗತರಾಗಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಸಜ್ಜಿತ ಪಾರ್ಕಿಂಗ್ ಪ್ರದೇಶ ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೋರ್ಟ್ ಆವರಣದಲ್ಲಿ ಸಾರ್ವಜನಿಕರಿಗಾಗಿ ಶೌಚಗೃಹ ನಿರ್ಮಿಸಲಾಗುವುದು. ಪ್ರಾಧಿಕಾರ, ಜಿಲ್ಲೆಯ ಪ್ರವಾಸೋದ್ಯಮ ಮತ್ತು ಸ್ಥಳೀಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ. ಟೆಂಪಲ್ ಮತ್ತು ಬೀಚ್ ಟೂರಿಸಂ ಅಭಿವೃದ್ಧಿ ನೆಲೆಯಲ್ಲಿ ಯೋಜನೆ ರೂಪಿಸಲಾಗುವುದು ಎಂದರು.

ಮಲ್ಪೆ ಪಡುಕೆರೆಯಲ್ಲಿ ಮರೀನ (ಅಂತಾರಾಷ್ಟ್ರೀಯ ಪ್ರವಾಸಿ ಹಡಗು ತಂಗುದಾಣ) ಯೋಜನೆ ಸಕಾರಗೊಳ್ಳಲು ಡಿಪಿಆರ್ ತಯಾರಿಸಲು 1 ಕೋ. ರೂ. ಅಗತ್ಯವಿದ್ದು, ಅದನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನೀಡಲು ಬದ್ಧ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ. ಎನ್., ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರದೀಪ್ ಡಿ’ಸೋಜ ಇದ್ದರು.

ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ. ಶೆಟ್ಟಿ ಸ್ವಾಗತಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!