ಉಡುಪಿಯ ಅಭಿವೃದ್ಧಿಯ ಅಭಿಯಾನ: ಸಚಿವ ಸುನಿಲ್ ಭರವಸೆ
(ಸುದ್ದಿಕಿರಣ ವರದಿ)
ಉಡುಪಿ: ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ಅಭಿವೃದ್ಧಿಯ ಅಭಿಯಾನವನ್ನೇ ಆರಂಭಿಸಲಾಗುವುದು ಎಂದು ಸಂಪುಟ ದರ್ಜೆ ನೂತನ ಸಚಿವ ವಿ. ಸುನಿಲ್ ಕುಮಾರ್ ಭರವಸೆ ನೀಡಿದರು.
ಶುಕ್ರವಾರ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ನೂತನ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನಿಲ್ ಕುಮಾರ್ ಅಭಿನಂದನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಾಮಾನ್ಯ ಕಾರ್ಯಕರ್ತನಾದ ತಾನು ಇಷ್ಟು ಎತ್ತರಕ್ಕೇರಲು ಪಕ್ಷ ಕಾರ್ಯಕರ್ತರು ಮತ್ತು ಹಿರಿಯರು ಕಾರಣ. ವಿವಿಧ ರೀತಿಯ ಹೋರಾಟಗಳಲ್ಲಿ ಪಕ್ಷ ಕೈಹಿಡಿದು ಮುನ್ನಡೆಸಿದೆ ಎಂದು ಸ್ಮರಿಸಿದ ಸಚಿವ ಸುನಿಲ್, ಸಚಿವ ಎಂಬ ಯಾವುದೇ ಅಹಮಿಕೆಯನ್ನು ತಾಳದೇ ಜಿಲ್ಲೆಯ ಅಭಿವೃದ್ಧಿಗೆ ತನ್ನ ಇತಿಮಿತಿಯಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ಸಚಿವನಾಗುವುದಕ್ಕಿಂತ ಮುನ್ನ ವಿಧಾನಸೌಧ ನೋಡಿದವ ನಾನಲ್ಲ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಆಸೆಗಣ್ಣುಗಳಿಂದ ವಿಧಾನಸೌಧವನ್ನು ಕಾಣುತ್ತಿದ್ದ ತಾನು ಮುಂದೊಂದು ದಿನ ಸಚಿವನಾಗುತ್ತೇನೆ ಎಂದು ಎಣಿಸಿರಲಿಲ್ಲ. ಸಾಮಾನ್ಯ ಕಾರ್ಯಕರ್ತನೋರ್ವ ಸಚಿವನಾಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.
ಭ್ರಷ್ಟಾಚಾರ ಮುಕ್ತ ಆಡಳಿತ
ಅಭಿನಂದನೆ ಸ್ವೀಕರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದೇಶದ ನಿಡುಗಾಲದ ಸಮಸ್ಯೆಗಳಾದ ಕಾಶ್ಮೀರ, ಅಯೋಧ್ಯೆ, ಅವಳಿ ತಲ್ಲಾಕ್ ಇತ್ಯಾದಿಗಳನ್ನು ಸರಳವಾಗಿ ಬಗೆಹರಿಸಿದ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನತೆಯಲ್ಲಿ ಹೊಸ ಭರವಸೆ ಮೂಡಿಸಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಬೇಕು ಎನ್ನುವುದು ಎಲ್ಲರ ಆಶಯವಾಗಿದ್ದು, ಬೊಮ್ಮಾಯಿ ಸರಕಾರದಲ್ಲಿ ಅದು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ತನಗೆ ಈ ಹಿಂದೆ ಯಡಿಯೂರಪ್ಪ ಸರಕಾರದಲ್ಲಿ ಮಂತ್ರಿ ಸ್ಥಾನ ಲಭಿಸಿದ್ದ ಸಂದರ್ಭ ಉಡುಪಿ ಜಿಲ್ಲಾ ಉಸ್ತುವಾರಿಗೆ ಬದಲಾಗಿ ಕಾರಣಾಂತರಗಳಿಂದ ದ.ಕ. ಜಿಲ್ಲೆಯ ಉಸ್ತುವಾರಿ ಲಭಿಸಿದ್ದು, ತನಗೆ ವಹಿಸಿದ ಖಾತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ತೃಪ್ತಿ ಇದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ, ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಮಾತನಾಡಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಬಿಜೆಪಿ ರಾಜ್ಯ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಬಿ. ಎನ್ ಶಂಕರ ಪೂಜಾರಿ, ಗೀತಾಂಜಲಿ ಸುವರ್ಣ ಮೊದಲಾದವರಿದ್ದರು.
ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ವಿವಿಧ ಮಂಡಲ ಪದಾಧಿಕಾರಿಗಳು, ಪಕ್ಷ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.