ಉಡುಪಿ: ಇಲ್ಲಿನ ಕೆಥೊಲಿಕ್ ಧರ್ಮಪ್ರಾಂತ್ಯದ ಯುವ ಆಯೋಗದ ನೂತನ ಕಾರ್ಯದರ್ಶಿ ಮತ್ತು ಭಾರತೀಯ ಕೆಥೊಲಿಕ್ ಯುವ ಸಂಘಟನೆ ನಿರ್ದೇಶಕರಾಗಿ ವಂ| ಚಾರ್ಲ್ಸ್ ಮಿನೇಜಸ್ ಅವರನ್ನು ನೇಮಿಸಿ, ಬಿಷಪ್ ವಂ. ಡಾ| ಜೆರಾಲ್ಡ್ ಐಸಾಕ್ ಲೋಬೊ ಆದೇಶಿಸಿದ್ದಾರೆ.
ಫಾ| ಚಾರ್ಲ್ಸ್ ಮಿನೇಜಸ್ ಸೋಮವಾರ ಬಿಷಪ್ ಹೌಸ್ ನಲ್ಲಿ ಅಧಿಕಾರ ವಹಿಸಿಕೊಂಡರು.
ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೊ ನೂತನ ನಿರ್ದೇಶಕರಿಗೆ ಪ್ರಮಾಣವಚನ ಬೋಧಿಸಿದರು. ನಿರ್ಗಮನ ನಿರ್ದೇಶಕ ಹಾಗೂ ಪ್ರಸ್ತುತ ವೈಸಿಎಸ್ ಸಂಘಟನೆಯ ಚಾಪ್ಲೆಯ್ನ್ ವಂ| ಎಡ್ವಿನ್ ಡಿ’ಸೋಜಾ ನೂತನ ನಿರ್ದೇಶಕರಿಗೆ ಸಂಘಟನೆಯ ದಾಖಲೆ ಹಸ್ತಾಂತರಿಸಿ ಶುಭ ಹಾರೈಸಿದರು.
ವಂ| ಚಾರ್ಲ್ಸ್ ಮಿನೇಜಸ್ ಮೂಲತಃ ಮೂಡುಬೆಳ್ಳೆ ಧರ್ಮಕೇಂದ್ರಕ್ಕೆ ಸೇರಿದವರಾಗಿದ್ದು 1991ರಲ್ಲಿ ಧರ್ಮಗುರುವಾಗಿ ದೀಕ್ಷೆ ಪಡೆದರು. ಬಳಿಕ ಆಗ್ರಾರ್, ಕುಲಶೇಖರ ಮತ್ತು ವಿಟ್ಲ ಚರ್ಚುಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
1997- 2005ರ ವರೆಗೆ ಮಂಗಳೂರು ಧರ್ಮಪ್ರಾಂತ್ಯದ ವೈಸಿಎಸ್ ಮತ್ತು ವೈಎಸ್.ಎಂ ಸಂಘಟನೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಬಳಿಕ 5 ವರ್ಷ ನೀರುಮಾರ್ಗ ಚರ್ಚ್ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದು, ಬಳಿಕ 2010- 15ರ ವರೆಗೆ ಧರ್ಮಪ್ರಾಂತ್ಯದ ವೈಸಿಎಸ್ ಮತ್ತು ವೈಎಸ್.ಎಮ್ ಸಂಘಟನೆಯ ರಾಷ್ಟ್ರೀಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
2015ರಲ್ಲಿ ಐವೈಸಿಎಸ್ ಸಂಘಟನೆ ಅಂತಾರಾಷ್ಟ್ರೀಯ ಚಾಪ್ಲೆಯ್ನ್ ಆಗಿ ನೇಮಕಗೊಂಡು 2019ರ ವರೆಗೆ ಸೇವೆ ಸಲ್ಲಿಸಿದರು.
ಪ್ರಸ್ತುತ ಅವರು ಉಡುಪಿ ಶೋಕಮಾತಾ ಚರ್ಚ್ ಪ್ರಧಾನ ಧರ್ಮಗುರುಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.