Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಉಡುಪಿ ನಗರಸಭೆ ಮಿಗತೆ ಬಜೆಟ್ ಮಂಡನೆ

ಉಡುಪಿ ನಗರಸಭೆ ಮಿಗತೆ ಬಜೆಟ್ ಮಂಡನೆ

ಉಡುಪಿ: ಮತ್ತೆ ಕೊರೊನಾ ಹೆಚ್ಚುತ್ತಿರುವ ಆತಂಕದ ನಡುವೆಯೂ ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಶನಿವಾರ 4.67 ಕೋ. ರೂ.ಗಳ ಮಿಗತೆ ಬಜೆಟ್ ಮಂಡಿಸಿದರು.

ಬಜೆಟ್ ನಲ್ಲಿ ಆರಂಭಿಕ ಶುಲ್ಕ 83.57 ಕೋ. ರೂ. ಸೇರಿ ಆಯವ್ಯಯ ಪತ್ರದ ಗಾತ್ರ ಒಟ್ಟು 146.91 ಕೋ. ಆಗಿದೆ. ಕೇಂದ್ರ ಹಾಗೂ ರಾಜ್ಯ ಹಣಕಾಸು ಆಯೋಗದ ಅನುದಾನ, ಸ್ವಚ್ಛ ಭಾರತ್ ಯೋಜನೆ ಅನುದಾನ, ಎಸ್.ಎಫ್.ಸಿ. ಅನುದಾನ ಸೇರಿದಂತೆ ಒಟ್ಟು 63.33 ಕೋ. ರೂ. ಆದಾಯ ನಿರೀಕ್ಷಿಸಲಾಗಿದೆ. ವಿವಿಧ ಯೋಜನೆಗಳು, ಅಭಿವೃದ್ಧಿ ಕಾರ್ಯಗಳಿಗೆ 142.24 ಕೋ. ರೂ. ಅನುದಾನ ಮೀಸಲಿಡಲಾಗಿದೆ.

ಪರ್ಕಳದಲ್ಲಿ ಸುಸಜ್ಜಿತ ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ 3.50 ಕೋ. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ.ಸಂತಕಟ್ಟೆಯಲ್ಲಿ ವಾರದ ಸಂತೆ ನಡೆಯುತ್ತಿದ್ದ 68 ಸೆಂಟ್ಸ್ ಜಾಗದಲ್ಲಿ 5 ಕೋ. ರೂ. ಹಾಗೂ ಮಣಿಪಾಲದಲ್ಲಿ 2.5 ಕೋ. ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿಮರ್ಿಸಲುದ್ದೇಶಿಸಲಾಗಿದೆ ಎಂದು ಸುಮಿತ್ರಾ ನಾಯಕ್ ಹೇಳಿದರು.

ಪೌರಕಾರ್ಮಿಕರ ಅನುಕೂಲಕ್ಕಾಗಿ ಬೀಡಿನಗುಡ್ಡೆ ಹಾಗೂ ಮಣಿಪಾಲದಲ್ಲಿ ತಲಾ 2 ಕೋ. ರೂ. ವೆಚ್ಚದಲ್ಲಿ ವಸತಿಗೃಹ ನಿರ್ಮಾಣ ಮಾಡಲಾಗುತ್ತಿದೆ. ನಗರದಲ್ಲಿ ಮಲೇರಿಯಾ, ಡೆಂಗ್ಯೂ ಮತ್ತು ಸಾಂಕ್ರಾಮಿಕ ರೋಗ ತಡೆಗೆ ಆರೋಗ್ಯ ಇಲಾಖೆಗೆ 42 ಲಕ್ಷ ರೂ. ಅನುದಾನ ನೀಡಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಬಗ್ಗೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.

ಸಿಟಿ ಬಸ್ ನಿಲ್ದಾಣವನ್ನು ಡಲ್ಟ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. ಅದರಲ್ಲಿ ಬಸ್ ನಿಲ್ದಾಣ ಹಾಗೂ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಮಲ್ಪೆ, ಉಡುಪಿ, ಮಣಿಪಾಲಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಡಿಸೈನ್ ಬಿಲ್ಡ್ ಮೆಂಟೆನೈಸ್ ಆ್ಯಂಡ್ ಫೈನಾಸ್ಸ್ ಮಾದರಿಯಲ್ಲಿ ಅಂದಾಜು 130 ಕೋ. ರೂ. ವೆಚ್ಚದಲ್ಲಿ ಉಡುಪಿ ಅರ್ಬನ್ ಡಿಜಿಟಲ್ ಇನ್ ಫ್ರಾಸ್ಟ್ರಕ್ಚರ್ ಪ್ರೊಜೆಕ್ಟ್ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ಲಾಸ್ಟಿಕ್ ಬ್ಯಾನರ್ ಸಂಪೂರ್ಣ ನಿಷೇಧಿಸಿ, ಬಟ್ಟೆ ಬ್ಯಾನರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಸದಸ್ಯರಾದ ಪ್ರಭಾಕರ ಪೂಜಾರಿ, ಮಂಜುನಾಥ ಮಣಿಪಾಲ, ಶ್ರೀಕೃಷ್ಣ ರಾವ್ ಕೊಡಂಚ, ವಿಜಯ ಕೊಡವೂರು, ವಿರೋಧ ಪಕ್ಷ ಸದಸ್ಯರಾದ ಅಮೃತಾ ಕೃಷ್ಣಮೂರ್ತಿ ಮತ್ತು ರಮೇಶ್ ಕಾಂಚನ್ ಮೊದಲಾದವರು ಬಜೆಟ್ ಚರ್ಚೆಯಲ್ಲಿ ಭಾಗವಹಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!