Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ `ಉಡುಪಿ ಮಕ್ಕಳ ಸ್ನೇಹಿ ಜಿಲ್ಲೆ'

`ಉಡುಪಿ ಮಕ್ಕಳ ಸ್ನೇಹಿ ಜಿಲ್ಲೆ’

ಉಡುಪಿ: ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಸೂಕ್ತ ರೀತಿಯಲ್ಲಿ ಆಗುತ್ತಿದ್ದು, ಉಡುಪಿ ಮಕ್ಕಳ ಸ್ನೇಹಿ ಜಿಲ್ಲೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ| ಆರ್. ಜಿ. ಆನಂದ್ ಬಣ್ಣಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸಂಬಂಧಿತ ಘಟಕಗಳ ಅಧಿಕಾರಿಗಳ ಸಭೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಅತ್ಯುತ್ತಮ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ 24 ಮಕ್ಕಳ ಪಾಲನಾ ಘಟಕ ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿರುವ 400ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಮಾಣವೂ ತೀರಾ ಕಡಿಮೆ. 2020ರಲ್ಲಿ ಬಾಲ್ಯವಿವಾಹ ಪ್ರಕರಣ ನಡೆದೇ ಇಲ್ಲ ಎಂದರು.

ಜಿಲ್ಲಾಡಳಿತ ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಕಾನೂನು ಬಗ್ಗೆ ಬಹಳ ಕಾಳಜಿ ವಹಿಸಿದೆ. ಜಿಲ್ಲೆಯ 34 ಪೊಲೀಸ್ ಠಾಣೆಗಳಲ್ಲಿಯೂ ಮಕ್ಕಳ ಕಲ್ಯಾಣ ಪೊಲೀಸ್ ಸಿಬಂದಿಗಳಿದ್ದಾರೆ ಎಂಬ ಸಂಗತಿ ಸಭೆಯಲ್ಲಿ ವ್ಯಕ್ತವಾಯಿತು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದ ಯೋಜನೆ ಜಾರಿಗೊಳಿಸುವಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ ಎಂದರು.

ಆದ್ಯತೆಯಲ್ಲಿ ಕಾರ್ಯನಿರ್ವಹಣೆ
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ, ಮಕ್ಕಳ ಕಾನೂನು, ಬಾಲಾಪರಾಧ, ಬಾಲ ಕಾರ್ಮಿಕ ಸಮಸ್ಯೆ ಮತ್ತು ಮಕ್ಕಳ ಶಿಕ್ಷಣ ಹಕ್ಕು ಎಂಬ 6 ಆದ್ಯತಾ ಕಾರ್ಯಕ್ರಮಗಳ ಮೇಲೆ ಕೆಲಸ ಮಾಡುತ್ತಿದೆ. ಮಕ್ಕಳು ಮಾದಕ ವಸ್ತುಗಳಿಗೆ ಬಲಿಯಾಗುವುದನ್ನು ತಡೆಯುವುದಕ್ಕಾಗಿ ನಾರ್ಕೊಟಿಕ್ ಪೊಲೀಸ್ ಮತ್ತು ಆಯೋಗ ಜಂಟಿ ಕಾರ್ಯಾಚರಣೆ ನಡೆಸಲೂ ಅವಕಾಶ ಇದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಹೆಚ್ಚುವರಿ ಎಸ್.ಪಿ ಕುಮಾರಚಂದ್ರ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಕ್ಷಣಾ ಘಟಕಗಳ ಅಧಿಕಾರಿಗಳು ಇದ್ದರು.

ಟೋಲ್ ಫ್ರೀ ನಂ.
ಪ್ರಸ್ತುತ ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಮಕ್ಕಳಿಂದ ಅಥವಾ ಮಕ್ಕಳ ಬಗೆಗಿನ ದೂರುಗಳನ್ನು ಮುಖತಃ ಸ್ವೀಕರಿಸಲು ಸಾಧ್ಯವಾಗದೇ ಇರುವುದರಿಂದ ಸಂವೇದನಾ ಎಂಬ ಟೋಲ್ ಫ್ರೀ ನಂ. 18001212830ಯನ್ನು ನಿಯೋಜಿಸಲಾಗಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ, ದೌರ್ಜನ್ಯ ಇತ್ಯಾದಿಗಳ ಬಗ್ಗೆ ಈ ಸಂಖ್ಯೆಗೆ ಕರೆ ಮಾಡಬಹುದು. ಸಂವೇದನಾ ಮೂಲಕ ಕನ್ನಡ ಸೇರಿದಂತೆ ದೇಶದ ಎಲ್ಲಾ ಮುಖ್ಯ ಭಾಷೆಗಳಲ್ಲಿ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಆನ್ ಲೈನ್ ಮೂಲಕವೇ ಆಪ್ತ ಸಲಹೆ (ಕೌನ್ಸಿಲಿಂಗ್) ಮಾಡಲಾಗುತ್ತದೆ. ಈಗಾಗಲೇ 300ಕ್ಕೂ ಅಧಿಕ ದೂರು ದಾಖಲಾಗಿವೆ ಎಂದು ಡಾ| ಆನಂದ ಹೇಳಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!