Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಉತ್ತಮ ಅಧ್ಯಯನದಿಂದ ಉನ್ನತಿ

ಉತ್ತಮ ಅಧ್ಯಯನದಿಂದ ಉನ್ನತಿ

ಉತ್ತಮ ಅಧ್ಯಯನದಿಂದ ಉನ್ನತಿ

(ಸುದ್ದಿಕಿರಣ ವರದಿ)

ಉಡುಪಿ: ಬಾಲ್ಯದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸಬಾರದು. ಕಠಿಣ ಪರಿಶ್ರಮದಿಂದ ಅಧ್ಯಯನವನ್ನು ತಪಸ್ಸಿನಂತೆ ನಡೆಸಬೇಕು. ಆ ಮೂಲಕ ಪಡೆದ ವಿದ್ಯೆಯೇ ನಮಗೆ ಉನ್ನತ ಸ್ಥಾನ ನೀಡುತ್ತದೆ ಎಂದು ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ. ಇ. ದೇವನಾಥನ್ ಹೇಳಿದರು.

ಪಾಡಿಗಾರು ಪುತ್ತಿಗೆ ಮಠಕ್ಕೆ ಭೇಟಿ ನೀಡಿದ ಅವರು, ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಸುಮಾರು 35 ವರ್ಷಗಳ ಹಿಂದೆ ತಾನು ಉನ್ನತಾಭ್ಯಾಸಕ್ಕಾಗಿ ನವದೆಹಲಿಯಲ್ಲಿದ್ದಾಗ ಪುತ್ತಿಗೆ ಶ್ರೀಪಾದರ ಸನ್ನಿಧಿಯಲ್ಲಿ ವೇದಾಂತ ಪರೀಕ್ಷೆ ನೀಡಿದ್ದನ್ನು ಸ್ಮರಿಸಿದ ದೇವನಾಥನ್, ಅಂದು ಶ್ರೀಗಳು ವಿಶೇಷವಾಗಿ ಅನುಗ್ರಹಿಸಿದ್ದರ ಫಲವಾಗಿ ಇಂದು ತನಗೆ ಉನ್ನತ ಪದವಿ ದೊರೆತಿದೆ ಎಂದು ವಿನೀತರಾಗಿ ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಾತನಾಡಿ, ಪ್ರೊ. ದೇವನಾಥನ್ ಅವರ ವಿದ್ವತ್ತು ಜೊತೆಗೆ ಅವರ ಸರಳತೆ ಎಲ್ಲರಿಗೂ ಆದರ್ಶ. ಸಂಸ್ಕೃತದ ಉನ್ನತ ವಿದ್ವಾಂಸ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಆಗಮಿಸಿದ್ದರಿಂದ ಸಂಸ್ಕೃತ ಕ್ಷೇತ್ರ ಇನ್ನೂ ವ್ಯಾಪಕವಾಗಿ ಬೆಳಗಲಿ ಎಂದು ಹಾರೈಸಿದರು.

ಕುಲಪತಿಯಾದ ಬಳಿಕ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ್ದ ಕುಲಪತಿಗಳನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತಿಗೆ ವಿದ್ಯಾಪೀಠ ಪ್ರಾಚಾರ್ಯ ವಿದ್ವಾನ್ ಸುನೀಲ್ ಆಚಾರ್ಯ, ವಿದ್ವಾನ್ ಶ್ರೀಪತಿ ಆಚಾರ್ಯ ಮೊದಲಾದವರಿದ್ದರು.

ಶ್ರೀ ವಾದಿರಾಜ ಸಂಶೋಧನ ಕೇಂದ್ರ ನಿರ್ದೇಶಕ ವಿದ್ವಾನ್ ಬಿ. ಗೋಪಾಲಾಚಾರ್ಯ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!