Thursday, July 7, 2022
Home ಸಮಾಚಾರ ಎಗ್ಗಿಲ್ಲದೆ ನಡೆಯುತ್ತಿರುವ ಕಾರ್ಯಕ್ರಮಗಳು; ಕಂಡೂ ಕಾಣದಂತಿರುವ ಜಿಲ್ಲಾಡಳಿತ

ಎಗ್ಗಿಲ್ಲದೆ ನಡೆಯುತ್ತಿರುವ ಕಾರ್ಯಕ್ರಮಗಳು; ಕಂಡೂ ಕಾಣದಂತಿರುವ ಜಿಲ್ಲಾಡಳಿತ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
********************************

(ಸುದ್ದಿಕಿರಣ ವರದಿ)

ಉಡುಪಿ, ಜು. 6: ಕಳೆದ ಸುಮಾರು ಎರಡು ವರ್ಷದಿಂದ ಜಿಲ್ಲೆಯೂ ಸೇರಿದಂತೆ ರಾಜ್ಯವ್ಯಾಪಿ ಕೊರೊನಾ ಹೈರಾಣಾಗಿಸಿದೆ. ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಕೊರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದೆ ಎಂಬ ಭ್ರಮೆಯಿಂದ ರಾಜ್ಯವ್ಯಾಪಿ ಅನ್ ಲಾಕ್ ಮಾಡಲಾಗಿದೆ. ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಈಮಧ್ಯೆ, ಕೊರೊನಾ ಮೂರನೇ ಅಲೆ ಅಪ್ಪಳಿಸಲಿದೆ ಎಂಬ ತಜ್ಞರ ವರದಿ ಆಧರಿಸಿ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಸೂಚನೆ ನೀಡಿದೆ. ಮಾಸ್ಕ್ ಧಾರಣೆ, ಸ್ವಚ್ಛತೆ, ವ್ಯಕ್ತಿಗತ ಅಂತರ ಪಾಲನೆ ಜೊತೆಗೆ ಯಾವುದೇ ಧಾರ್ಮಿಕ, ರಾಜಕೀಯ, ಸಾಮಾಜಿಕ ಕಾರ್ಯಕ್ರಮಗಳನ್ನು ನಿಷೇಧಿಸಿದೆ.

ಆದರೆ, ಉಡುಪಿ ಜಿಲ್ಲೆಯಲ್ಲಿ ಸರ್ಕಾರದ ಈ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕಳೆದ 2- 3 ದಿನಗಳ ಹಿಂದೆ ಕೇವಲ 29 ಮಂದಿ ಸೋಂಕಿತರನ್ನು ಕಂಡ ಜಿಲ್ಲೆ, ಮಂಗಳವಾರ 113ಕ್ಕೇರಿದೆ. ಕೊರೊನಾ ವಿಚಾರದಲ್ಲಿ ಜಿಲ್ಲೆ ಇನ್ನೂ ಆತಂಕದಲ್ಲಿದೆ.

ನಿನ್ನೆಯಿಂದ ಜು. 19ರ ವರೆಗೆ ಜಿಲ್ಲೆಯಲ್ಲಿ ರಾತ್ರಿ ಕರ್ಪ್ಯೂ ವಿಧಿಸಲಾಗಿದೆ.

ಆದರೆ, ಜಿಲ್ಲೆಯಲ್ಲಿ ರಾಜಕೀಯ ಹಿನ್ನೆಲೆಯ ಕಾರ್ಯಕ್ರಮಗಳು ಎಗ್ಗಿಲ್ಲದೇ ನಡೆಯುತ್ತಿವೆ. ವಾರಾಂತ್ಯ ಕರ್ಪ್ಯೂ ಜಾರಿಯಲ್ಲಿದ್ದ ಸಂದರ್ಭದಲ್ಲಿಯೇ ಸಚಿವರುಗಳು ಜಿಲ್ಲೆಗಾಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ! ಇದನ್ನೆಲ್ಲ ಕಂಡೂ ಕಾಣದಂತಿದೆ ಜಿಲ್ಲಾಡಳಿತ!

ಒಂದೆಡೆ ಶ್ಯಾಮಪ್ರಸಾದ ಮುಖರ್ಜಿ ಹೆಸರಿನಲ್ಲಿ ಬಿಜೆಪಿ ಸಂಘಟನೆಯ ವೃಕ್ಷಾರೋಪಣ ಕಾರ್ಯಕ್ರಮ ಸಸ್ಯೋತ್ಸವ, ಇನ್ನೊಂದೆಡೆ ಮೀನುಗಾರರ ಸಮಸ್ಯೆ ಆಲಿಕೆಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರ್ಯಕ್ರಮ, ಜೆಡಿಎಸ್- ಸಿಪಿಐ (ಎಂ)ನ ವಿವಿಧ ಸಂಘಟನೆಗಳು ಪೆಟ್ರೋಲ್ ಬೆಲೆ ಏರಿಕೆ, ಕಾರ್ಮಿಕರ ಸವಲತ್ತು ಹೆಚ್ಚಳ ಇತ್ಯಾದಿಗಳಿಗಾಗಿ ನಡೆಸುತ್ತಿರುವ ಪ್ರತಿಭಟನೆ, ಮನವಿ ಸಲ್ಲಿಕೆ ಕಾರ್ಯಕ್ರಮ. ಸಾಲದೆಂಬಂತೆ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ದಿನಂಪ್ರತಿ ನಡೆಯುತ್ತಲೇ ಇರುವ ಹಡಿಲು ಭೂಮಿಯಲ್ಲಿ ಭತ್ತ ನಾಟಿ ಕಾರ್ಯಕ್ರಮ.…. ಹೀಗೆ ದಿನವೂ ಎಂಬಂತೆ ವಿವಿಧ ಕಾರ್ಯಕ್ರಮಗಳು ಎಗ್ಗಿಲ್ಲದೇ ನಡೆಯುತ್ತಿವೆ. ಎಲ್ಲಿಯೂ ಕೋವಿಡ್ ನಿಯಮ ಸರಿಯಾಗಿ ಪಾಲನೆ ಆಗುತ್ತಿಲ್ಲ, ವ್ಯಕ್ತಿಗತ ಅಂತರವಂತೂ ಗಗನಕುಸುಮ. ಖಡಕ್ ಜಿಲ್ಲಾಧಿಕಾರಿ ಎಂಬ ಖ್ಯಾತಿಯ ಜಿ. ಜಗದೀಶ್ ಹಲ್ಲಿಲ್ಲದ ಹಾವಿನಂತಾಗಿದ್ದಾರೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬ ಮಾತಿನಂತೆ ಸಾಮಾನ್ಯ ಜನರು ಮದುವೆ ಇತ್ಯಾದಿ ಆಯೋಜಿಸುವುದಿದ್ದರೆ ಪಾಸ್ ಬೇಕು, ಸತ್ತವರ ಅಂತ್ಯಸಂಸ್ಕಾರದಲ್ಲಿ 20 ಜನ ಮೀರುವಂತಿಲ್ಲ. ಆದರೆ, ಇಂಥ ರಾಜಕೀಯ ಹಿನ್ನೆಲೆಯ ಕಾರ್ಯಕ್ರಮಗಳಿಗೆ ಯಾರ ಪರವಾನಿಗೆ ಇದೆ? ಯಾರು ಪಾಸ್ ನೀಡುತ್ತಾರೆ?

ಜಿಲ್ಲೆಯ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಒಂದಷ್ಟು ದಿನಗಳ ವರೆಗಾದರೂ ಕಾರ್ಯಕ್ರಮಗಳ ಆಯೋಜನೆ ಸ್ಥಗಿತಗೊಳಿಸಲು ಅಸಾಧ್ಯವೇ? ಜಿಲ್ಲಾಡಳಿತ ಅಂಕುಶ ಹೇರಲು ಅಂಜಿಕೆಯೇ?

ಇದು ಜಿಲ್ಲೆಯ ಆರೋಗ್ಯ ಬಯಸುವ ಸಾರ್ವಜನಿಕರ ಪ್ರಶ್ನೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!