Thursday, December 2, 2021
Home ಸಮಾಚಾರ ಜಿಲ್ಲಾ ಸುದ್ದಿ ಎನ್.ಇ.ಪಿ ಜಾರಿ ಹಿಂದೆ ಖಾಸಗೀಕರಣದ ದುರುದ್ದೇಶ

ಎನ್.ಇ.ಪಿ ಜಾರಿ ಹಿಂದೆ ಖಾಸಗೀಕರಣದ ದುರುದ್ದೇಶ

ಎನ್.ಇ.ಪಿ ಜಾರಿ ಹಿಂದೆ ಖಾಸಗೀಕರಣದ ದುರುದ್ದೇಶ

ಉಡುಪಿ, ನ. 24 (ಸುದ್ದಿಕಿರಣ ವರದಿ): ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ)ಯನ್ನು ತರಾತುರಿಯಲ್ಲಿ ಜಾರಿಗೆ ತರುತ್ತಿರುವುದರ ಹಿಂದೆ ಖಾಸಗೀಕರಣದ ದುರುದ್ದೇಶವಿದೆ ಎಂದು ಎನ್.ಎಸ್.ಯು.ಐ ರಾಜ್ಯ ಘಟಕ ಅಧ್ಯಕ್ಷ ಕೀರ್ತಿ ಗಣೇಶ್ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರೀಕರಣಗೊಳಿಸಿ, ಸರಕಿನಂತಾಗುವುದರಲ್ಲಿ ಸಂಶಯವಿಲ್ಲ. ಶಿಕ್ಷಣದಿಂದ ಲಾಭ ಮಾಡಿಕೊಳ್ಳುವ ಕಾರ್ಪೊರೇಟ್ ಮನೆತನಗಳಿಗೆ ಒಪ್ಪಿಸುವ ಸಾಧ್ಯತೆ ಹೆಚ್ಚಿದೆ. ಪುಸ್ತಕ ನೀಡುವುದರಿಂದ ಹಿಡಿದು ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುವ ವಿಶ್ವವಿದ್ಯಾಲಯಗಳ ಅಧಿಕಾರ ಕಿತ್ತುಕೊಳ್ಳಲು ಮುಂದಾಗಿದೆ. ಕಾಲೇಜು ಆಡಳಿತ ಮಂಡಳಿಗೆ ಎಲ್ಲ ಅಧಿಕಾರ ನೀಡಲು ಹೊರಟಿದೆ. ಈ ನೀತಿ ಜನವಿರೋಧಿ ಎಂದರು.

ಶಿಕ್ಷಣ ನೀತಿಯನ್ನು ಜಾರಿ ಮಾಡುವ ಮೊದಲು ಸಾಧಕ ಬಾಧಕಗಳ ಬಗ್ಗೆ ಚರ್ಚಿಸದೇ ಏಕಾಏಕಿ ಅನುಷ್ಠಾನಕ್ಕೆ ತರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳೇ ಇರುವುದಿಲ್ಲ. ಅವೆಲ್ಲವೂ ಖಾಸಗಿಯಾಗಲಿದ್ದು ವಿದ್ಯಾರ್ಥಿ ವೇತನವನ್ನೇ ನಂಬಿಕೊಂಡು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಕೊರೊನಾ ವಿರುದ್ಧ ಹೋರಾಡುತ್ತಿರುವ ಸಮಯವನ್ನು ದುರುಪಯೋಗ ಮಾಡಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೇರಲು ಹೊರಟಿದೆ. ಎನ್.ಇ.ಪಿ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಲು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಿದೆ. ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದರೆ ರಾಜ್ಯಕ್ಕೆ ಮಾರಕ. ಈ ನೀತಿಯ ಬಗ್ಗೆ ಚರ್ಚೆ, ಸಂಶೋಧನೆ, ಸಂಸತ್, ಸದನದಲ್ಲಿ ಸಾಧಕ ಬಾಧಕ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ, ಈ ಬಗ್ಗೆ ಚರ್ಚೆಯಾಗದೇ ನೀತಿ ಜಾರಿಯಾಗುತ್ತಿರುವುದು ದುರದೃಷ್ಟಕರ. ಎನ್.ಇ.ಪಿಯಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಹಿನ್ನಡೆಯಾಗಲಿದೆ. ಯಾವುದೇ ಶಿಕ್ಷಣ ನೀತಿ ಜಾರಿಗೆ ತರುವಾಗ ಅದಕ್ಕೆ ಮುನ್ನೋಟ, ದೂರದೃಷ್ಟಿ ಇರಬೇಕು. ಈ ಶಿಕ್ಷಣ ನೀತಿ ಅವೈಜ್ಞಾನಿಕ ಎಂದರು.

ಪ್ರಧಾನ ಕಾರ್ಯದರ್ಶಿ ರಫೀಕ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ ಮಾಡುವ ಮುನ್ನ ಯಾವುದೇ ರೀತಿಯ ಕುಂದುಕೊರತೆ ಆಲಿಸಿಲ್ಲ. ಶಿಕ್ಷಣವನ್ನು ಖಾಸಗೀಕರಣ, ವ್ಯಾಪಾರೀಕರಣ ಮಾಡಲು ಸರ್ಕಾರ ಹುನ್ನಾರ ನಡೆಸಿದೆ. ಅದರ ವಿರುದ್ದ ಹೋರಾಟ ನಡೆಸಬೇಕಿದೆ. ಇದು ಯಾವುದೇ ರೀತಿಯ ರಾಜಕೀಯ ಪ್ರೇರಿತ ವಿರೋಧವಲ್ಲ. ಈ ನೀತಿಯನ್ನು ತಜ್ಞರ ಸಲಹೆ ಪಡೆದು, ತಪ್ಪುಗಳನ್ನು ಸರಿಪಡಿಸಿ ಜಾರಿಗೊಳಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.

ಎನ್.ಎಸ್.ಯು.ಐ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಸೌರಭ್ ಬಲ್ಲಾಳ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಜಾಗೃತಿ, ಕರಪತ್ರ ಹಂಚುವ ಮೂಲಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎನ್.ಎಸ್.ಯು.ಐ ಜಿಲ್ಲಾ ಉಪಾಧ್ಯಕ್ಷರಾದ ಮಹಮ್ಮದ್ ಝಮೀರ್ ಮತ್ತು ಸಾಯಿ ಕಿರಣ್, ಪದಾಧಿಕಾರಿಗಳಾದ ಸೈಯ್ಯದ್ ಫುರ್ಕಾನ್, ಸಾರ್ಥಕ್, ರಕ್ಷಿತ್ ರಾಜ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!