Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಎಲ್ಲಾ ಕಚೇರಿಗಳಲ್ಲಿ ಕನ್ನಡ ಕಡ್ಡಾಯ ಅನುಷ್ಠಾನ

ಎಲ್ಲಾ ಕಚೇರಿಗಳಲ್ಲಿ ಕನ್ನಡ ಕಡ್ಡಾಯ ಅನುಷ್ಠಾನ

ಸುದ್ದಿಕಿರಣ ವರದಿ
ಮಂಗಳವಾರ, ಜೂನ್ 14

ಎಲ್ಲಾ ಕಚೇರಿಗಳಲ್ಲಿ ಕನ್ನಡ ಕಡ್ಡಾಯ ಅನುಷ್ಠಾನ
ಉಡುಪಿ: ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಪ್ರತಿಶತ ನೂರರಷ್ಟು ಕನ್ನಡದ ಬಳಕೆ ಆಗುವ ಕುರಿತಂತೆ ಎಲ್ಲಾ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ| ಟಿ.ಎಸ್. ನಾಗಾಭರಣ ಹೇಳಿದರು.

ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಕುರಿತು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ವ್ಯವಹಾರ ಕನ್ನಡದಲ್ಲಿರಲಿ
ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವಾಗ ಇಲಾಖೆಗಳ ನಡುವಿನ ಪ್ರತಿಯೊಂದೂ ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು.

ಒಂದೊಮ್ಮೆ ಅಂಗ್ಲ ಭಾಷೆಯಲ್ಲಿ ಇದ್ದಲ್ಲಿ ಸಂಬಂಧಪಟ್ಟ ಇಲಾಖೆಗೆ ಎಚ್ಚರಿಸುವ ಕೆಲಸವನ್ನು ಮಗದೊಂದು ಇಲಾಖೆ ಮಾಡುವುದರೊಂದಿಗೆ ಸಮನ್ವಯ ಸಾಧಿಸಬೇಕು ಎಂದರು.

ಬ್ಯಾಂಕುಗಳಲ್ಲೂ ಕನ್ನಡ
ಸಾರ್ವಜನಿಕರು ತಮ್ಮ ದೈನಂದಿನ ಆರ್ಥಿಕ ಚಟುವಟಿಕೆ ನಡೆಸಿ, ಅಗತ್ಯ ಸೇವೆ ಪಡೆಯಲು ವಿತ್ತಸಂಸ್ಥೆ (ಬ್ಯಾಂಕ್)ಗಳಿಗೆ ಭೇಟಿ ನೀಡಿದಾಗ, ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು.

ಒಂದೊಮ್ಮೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಕನ್ನಡದ ಭಾಷಾ ಸಮಸ್ಯೆ ಇದ್ದಲ್ಲಿ ಅವರಿಗೆ ಆಗಿಂದಾಗ್ಗೆ ಕನ್ನಡ ಕಲಿಕೆ ತರಬೇತಿ ನೀಡುವ ಕಾರ್ಯ ಅಗ್ರಣಿ ಬ್ಯಾಂಕ್ ಗಳಿಂದ ಆಗಬೇಕು ಎಂದು ಸೂಚಿಸಿದರು.

ಪ್ರಸ್ತುತ ಜಿಲ್ಲೆಯ ಬ್ಯಾಂಕ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಹಾಗೂ ಕನ್ನಡೇತರ ಸಿಬ್ಬಂದಿಗಳ ಬಗ್ಗೆ ಹಾಗೂ ಅವರಿಗೆ ಕನ್ನಡ ಓದಲು, ಬರೆಯಲು ಹಾಗೂ ಮಾತನಾಡುವ ಬಗ್ಗೆ ವಿವರಗಳನ್ನು ಪ್ರಾಧಿಕಾರಕ್ಕೆ ನೀಡಬೇಕು ಎಂದ ಅವರು, ನೇಮಕಾತಿ ಸಂದರ್ಭದಲ್ಲಿ ಹೆಚ್ಚಿನ ಕನ್ನಡಿಗರೇ ಬ್ಯಾಂಕ್ ಉದ್ಯೋಗದಲ್ಲಿ ಸೇರುವಂತೆ ತರಬೇತಿ ಕಾರ್ಯಕ್ರಮ ಆಯೋಜಿಸಬೇಕು.

ಎಟಿಎಂ ಯಂತ್ರದ ಡಿಸ್ ಪ್ಲೇಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಿರುವಂತೆ ಎಚ್ಚರವಹಿಸಬೇಕು ಎಂದರು.

ಎಚ್ಚರಿಕೆ ಫಲಕ ಕನ್ನಡದಲ್ಲಿರಲಿ
ಜಿಲ್ಲೆಯ ಎಲ್ಲಾ ಕೈಗಾರಿಕೆಗಳಲ್ಲಿ ಅಪಾಯದ ಎಚ್ಚರಿಕೆ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಿದ್ದಲ್ಲಿ ಸ್ಥಳಿಯರಿಗೆ ಅದರ ಎಚ್ಚರಿಕೆ ಗೊತ್ತಾಗಿ ಅಪಘಾತ ಸಂಭವಿಸುವುದು ತಪ್ಪುತ್ತದೆ.

ಕೈಗಾರಿಕೆಗಳಲ್ಲಿ ಕೌಶಲ್ಯ ಹಾಗೂ ಅಕೌಶಲ್ಯ ಕೆಲಸಗಳಿಗೆ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದ ಅವರು, ಪ್ರತಿಯೊಂದು ಉದ್ಯೋಗ ಘಟಕಗಳಲ್ಲಿ ಕನ್ನಡ ಘಟಕಗಳನ್ನು ತೆರೆಯಬೇಕು. ಅದರಲ್ಲಿ ಸಿಬ್ಬಂದಿ ವರ್ಗದವರು ಹೆಚ್ಚು ಇರುವುದು ಅಗತ್ಯ ಎಂದರು.

ಗೊಬ್ಬರ, ಕೀಟನಾಶಕ ಮತ್ತು ಔಷಧಿಗಳ ಮೇಲೆ ಅವುಗಳ ಬಳಕೆ ಹಾಗೂ ಅದರಲ್ಲಿನ ಅಂಶಗಳ ಕುರಿತು ಕನ್ನಡದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.

ಒಂದೊಮ್ಮೆ ನಮೂದಿಸದೇ ಇರುವುದು ಕಂಡುಬಂದಲ್ಲಿ ಅಂಥ ಕಂಪೆನಿಗಳಿಗೆ ಪತ್ರ ಬರೆದು ನಮೂದಿಸುವಂತೆ ಎಚ್ಚರಿಸಬೇಕು.

ವೈದ್ಯರೂ ಕನ್ನಡದಲ್ಲಿಯೇ ತಿಳಿಸಲಿ
ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಪರೀಕ್ಷಾ ವರದಿ ಅಥವಾ ರೋಗದ ಬಗ್ಗೆ ರೋಗಿಗಳು ಅಥವಾ ಅವರ ಸಂಬಂಧಿಕರಿಗೆ ಕನ್ನಡದಲ್ಲಿಯೇ ಸ್ಪಷ್ಟವಾಗಿ ಅರ್ಥವಾಗುವಂತೆ ತಿಳಿಸಬೇಕು.

ಆರೋಗ್ಯ ಅಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಇತರ ಇಲಾಖೆಗಳಿಗೆ ವರದಿ ಕಳುಹಿಸುವಾಗ ಅವು ಕನ್ನಡದಲ್ಲಿಯೇ ಇರಬೇಕು ಎಂದರು.

ಸಾಮಾನ್ಯವಾಗಿ ಎಲ್ಲಾ ಆಂಗ್ಲ ಪದಗಳಿಗೆ ಪರ್ಯಾಯವಾಗಿ ಕನ್ನಡ ಬಳಕೆಗೆ ಅನುಕೂಲವಾಗುವಂತೆ ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ 86 ವಿವಿಧ ಶಬ್ದಕೋಶಗಳು ಲಭ್ಯವಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬಹುದು ಎಂದ ನಾಗಾಭರಣ, ಆಡಳಿತದಲ್ಲಿ ಮಿಂಚಂಚೆ ಕಳುಹಿಸುವಾಗ ವಿಳಾಸವನ್ನು ಕನ್ನಡದ ಪದ ಬಳಕೆ ಪ್ರಾರಂಭವಾಗಿದ್ದು, ಅದರ ಬಳಕೆಯಾಗಬೇಕು ಎಂದರು.

ಶಾಲೆಗಳಲ್ಲೂ ಕನ್ನಡ
ಕನ್ನಡ ಕಲಿಕಾ ಅಧಿನಿಯಮ 2017ರ ಅನ್ವಯ ಎಲ್ಲಾ ಶಾಲೆಗಳು, ಮದರಸಗಳೂ ಸೇರಿದಂತೆ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಇರಬೇಕು. ಸಿ.ಬಿ.ಎಸ್.ಸಿ. ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ 1ರಿಂದ 9ರ ವರೆಗೆ ಸ್ಥಳೀಯ éಭಾಷೆಯನ್ನು ಒಂದು ವಿಷಯವಾಗಿ ಕಲಿಸಿದರೂ 10ನೇ ತರಗತಿಯಲ್ಲಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

ಈ ಅಂಕಗಳನ್ನು ಗಣನೆಗೆ ತೆಗದುಕೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ಲೆಡೆಯೂ ಕನ್ನಡ
ಜಾಹೀರಾತು ಫಲಕಗಳಲ್ಲಿ ಕನ್ನಡದ ಬಳಕೆ ಅಲ್ಪ ಪ್ರಮಾಣದಲ್ಲಿ ಇರುವಂಥ ಪ್ರಕಟಣೆಗಳಿಗೆ ಕಡಿವಾಣ ಹಾಕಬೇಕು. ಅಂಗಡಿ ನಾಮಫಲಕಗಳು ಕನ್ನಡದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದರು.

ಇಲಾಖೆಗಳಲ್ಲಿ ಅಭಿವೃದ್ಧಿ ಕಾರ್ಯಗಳೂ ಸೇರಿದಂತೆ ಮತ್ತಿತರ ಟೆಂಡರ್ ಕರೆಯುವಾಗ ಅರ್ಜಿ ನಮೂನೆಗಳು ಪ್ರತಿಯೊಂದೂ ಕನ್ನಡದಲ್ಲಿಯೇ ಇರಬೇಕು. ಉದ್ಯಾನವನಗಳು, ಸರಕಾರಿ ಕಟ್ಟಡಗಳಲ್ಲಿ ಕನ್ನಡದ ಕವಿಗಳು ಸಮಾಜಕ್ಕೆ ನೀಡಿರುವ ಹಿತ ಸಂದೇಶ ಪ್ರಚುರಪಡಿಸಬೇಕು. ಕನ್ನಡ ಎಲ್ಲೆಡೆ ಕಾಣಬೇಕು, ಕನ್ನಡ ಎಲ್ಲೆಡೆ ಕೇಳಬೇಕು ಎಂದ ಅವರು, ಉಡುಪಿ ಜಿಲ್ಲೆ ಕನ್ನಡ ಅನುಷ್ಠಾನಗೊಳಿಸುವಲ್ಲಿ ಮಾದರಿ ಜಿಲ್ಲೆಯಾಗಬೇಕು ಎಂದು ಆಶಿಸಿದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮಾತನಾಡಿ, ಜಿಲ್ಲೆಯನ್ನು ಎಲ್ಲರ ಸಹಭಾಗಿತ್ವದೊಂದಿಗೆ ಕನ್ನಡಮಯವಾಗಿಸಬಹುದಾಗಿದ್ದು, ಅದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಇಂದಿನ ಸಭೆಯಲ್ಲಿ ನೀಡಿರುವ ಸಲಹೆ ಹಾಗೂ ಮಾರ್ಗದರ್ಶನಗಳು ಕನ್ನಡ ಅನುಷ್ಠಾನಕ್ಕೆ ಹೆಚ್ಚಿನ ಸಹಕಾರಿಯಾಗಲಿವೆ ಎಂದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ| ರಮೇಶ್ ಗುಬ್ಬಿಗೂಡು, ಕಾರ್ಯದರ್ಶಿಗಳಾದ ಡಾ| ಸಂತೋಷ್ ಹಾನಗಲ್ ಮತ್ತು ಮಹೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ವಿವಿಧ ಸಾಹಿತಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!