ಬ್ರಹ್ಮಾವರ: ಒಂದು ಕಾಲದಲ್ಲಿ ಆಳುಪರ ರಾಜಧಾನಿಯಾಗಿದ್ದು, ಆ ನಂತರದಲ್ಲಿ ವಿಜಯನಗರ ಅರಸರ ರಾಜಧಾನಿಯಾಗಿದ್ದ ಬಾರಕೂರಿನಲ್ಲಿ 365 ದೇವಾಲಯಗಳು, ಕೋಟೆ, ಬಸದಿಗಳು, ಶಾಸನಗಳು, ನೀರಾವರಿಗೆ ಸಂಬಂಧಪಟ್ಟ ರಚನೆಗಳು, ಟಂಕಸಾಲೆ ಇತ್ತು ಎಂಬುದು ಪುರಾತತ್ತ್ವ ಮತ್ತು ಇತಿಹಾಸದ ದಾಖಲೆಗಳಿಂದ ತಿಳಿಯಬಹುದು. ಐತಿಹಾಸಿಕ ಕಾಲದಲ್ಲಿ ವಿಜೃಂಭಣೆಯಿಂದ ಮೆರೆಯುತ್ತಿದ್ದ ಬಾರಕೂರು, ಇಂದು ಅಲ್ಲಿರುವ ಐತಿಹಾಸಿಕ ಆಕರಗಳನ್ನು ಉಳಿಸಿಕೊಳುವಲ್ಲಿ ಹರಸಾಹಸಪಬೇಕಾದ ದುಃಸ್ಥಿತಿಗೆ ತಲುಪಿದೆ. ಆ ಪ್ರದೇಶಕ್ಕೆ ಭೇಟಿ ನೀಡಿದಲ್ಲಿ ಅಲ್ಲಿನ ಪರಿಸ್ಥಿತಿಯ ಅರಿವಾಗುತ್ತದೆ.
ಅಲ್ಲಿರುವ ದೇವಾಲಯಗಳಲ್ಲಿ ಅನೇಕ ಶಾಸನಗಳು ಹಾಗೂ ಸ್ಮಾರಕ ಶಿಲ್ಪಗಳು ಕಂಡುಬರುತ್ತವೆ. ಆದರೆ, ಇಂದು ಆ ಶಾಸನದ ಮೇಲೆ ಶ್ವಾನ ನಿದ್ರಿಸುವಂತಾಗಿದೆ! ಸ್ಮಾರಕ ಶಿಲ್ಪದ ಬಳಿ ಕಸದ ತೊಟ್ಟಿ, ಪೈಂಟಿಂಗ್ ಪರಿಕರ ಇಡಲಾಗುತ್ತಿದೆ!!
ಈ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ, ಕೆಲವರು ಅಧ್ಯಯನ ಮಾಡಲು ಬರುತ್ತಾರೆ. ಅವರಿಗೆ ಬೇಕಾದದ್ದು ಮಾಡಿಕೊಂಡು ಹೋಗುತ್ತಾರೆ ಅಷ್ಟೇ. ಆಮೇಲೆ ಅದರ ಪರಿಸ್ಥಿತಿ ಇಷ್ಟೇ ಎಂದು ಖಿನ್ನವದನರಾಗಿ ಹೇಳುತ್ತಾರೆ.
ಪುರಾತತ್ವ ಇಲಾಖೆ ಈ ಪ್ರದೇಶದ ದಾಖಲೆ ಉಳಿಸುವಲ್ಲಿ ವಿಫಲವಾಗಿದೆ ಎಂದು ಬೇಸರದಿಂದಲೇ ಹೇಳಬೇಕಾಗಿದೆ. ಹೆಸರಿಗೆ ಮಾತ್ರ ಪುರಾತತ್ವ ಇಲಾಖೆಗೆ ಈ ಸ್ಥಳ ಸೇರಿದ್ದು ಎಂದು ಹೇಳುತ್ತಿರುವ ಇಲಾಖೆಯ ಕಚೇರಿಯೂ ಅಲ್ಲಿಲ್ಲ. ಅಲ್ಲಿನ ದೇವಾಲಯ ಅಥವಾ ಕತ್ತಲೆ ಕೋಣೆಯಂತಿರುವ ಬಸದಿಗಳಿಗೆ ಭೇಟಿ ನೀಡಿದರೆ ಅವುಗಳ ಬಗ್ಗೆ ವಿವರಣೆ ಕೊಡಲೂ ಯಾರೂ ಇಲ್ಲ.
ಇತಿಹಾಸದ ಗತವೈಭವದ ಸ್ಮರಣೆಯನ್ನು ಮಾಡಲಾದರೂ ಸಂಬಂಧಿತ ಇಲಾಖೆ, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುವುದು ಅತೀ ಅಗತ
-ಗಣೇಶರಾಜ್ ಸರಳೇಬೆಟ್ಟು.