ಒಮಿಕ್ರಾನ್ ವೈರಸ್ ಬಗ್ಗೆ ಭಯ ಬೇಡ; ಎಚ್ಚರವಿರಲಿ
ದಾವಣಗೆರೆ, ನ. 29 (ಸುದ್ದಿಕಿರಣ ವರದಿ): ಸರ್ಕಾರದ ಮುಂದೆ ಲಾಕ್ ಡೌನ್ ಪ್ರಸ್ತಾವನೆ ಇಲ್ಲ. ಶಾಲಾ- ಕಾಲೇಜುಗಳ ಮೇಲೆ ನಿಗಾ ಇಡಲು ಸೂಚಿಸಿದ್ದು, ಅವುಗಳನ್ನು ಮುಚ್ಚಲು ತಿಳಿಸಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದಿಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ರೂಪಾಂತರಿ ವೈರಸ್ ಒಮಿಕ್ರಾನ್ ಬಗ್ಗೆ ಜನತೆ ಭಯಪಡದೆ, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ರೂಪಾಂತರಿ ವೈರಸ್ ಕಂಡುಬಂದಿರುವ ದೇಶಗಳಿಂದ ಬಂದಿರುವವರ ಹಾಗೂ ಬರುವವರ ಮೇಲೆ ನಿಗಾ ಇರಿಸಲಾಗುತ್ತಿದ್ದು, ಅವರ ಸಂಪರ್ಕಿತರ ಪತ್ತೆಹಚ್ಚಿ ಪರೀಕ್ಷಿಸಲಾಗುತ್ತಿದೆ. ಅಲ್ಲದೆ, ವಿಮಾನ ನಿಲ್ದಾಣಗಳಲ್ಲಿಯೂ ಕಟ್ಟುನಿಟ್ಟಿನ ಪರೀಕ್ಷೆ ಮಾಡುತ್ತಿದ್ದು, ನೆಗಟಿವ್ ಇದ್ದರೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.
ಕೇರಳದಿಂದ ಎಲ್ಲಾ ಜಿಲ್ಲೆಗಳಿಗೆ ಆಗಮಿಸಿರುವ ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಕಡ್ಡಾಯ ಹಾಗೂ 7ನೇ ದಿನಕ್ಕೆ ಮತ್ತೊಮ್ಮೆ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಜನರು ಹೆಚ್ಚಾಗಿ ಗುಂಪು ಸೇರುವುದನ್ನು ತಡೆಯಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದರು.
ನಿರಂತರ ಸಂಪರ್ಕ
ಸರ್ಕಾರ ನಿರಂತರವಾಗಿ ತಜ್ಞರು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿ. ಕಾಲಕಾಲಕ್ಕೆ ಅವರು ನೀಡುವ ನಿರ್ದೇಶನದಂತೆ ಕ್ರಮ ವಹಿಸಲಾಗುವುದು. ದಕ್ಷಿಣ ಆಫ್ರಿಕಾದಿಂದ ಆಗಮಿಸಿರುವ ವ್ಯಕ್ತಿಯೋರ್ವರಿಗೆ ವಿಭಿನ್ನ ಲಕ್ಷಣ ಕಂಡುಬಂದಿರುವ ಹಿನ್ನೆಲೆಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ಐ.ಸಿ.ಎಂ.ಆರ್.ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಯಾವ ತಳಿ ಎಂದು ತಿಳಿಯಲಿದೆ ಎಂದರು.
ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಬೇಕು. ಈ ಬಗ್ಗೆ ನಾವು ನಿರ್ಧಾರ ಕೈಗೊಳ್ಳಲು ಆಗೊಲ್ಲ.
ಶಾಲಾ ಕಾಲೇಜುಗಳಲ್ಲಿ ಕೊವಿಡ್ ಬಗ್ಗೆ ನಿಗಾ ವಹಿಸಲು ಸೂಚಿಸಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡುವ ಅಗತ್ಯವೇ ಇಲ್ಲ. ನಮ್ಮ ಕಾಳಜಿ ಆರೋಗ್ಯ ಕಾರ್ಯಕರ್ತರದ್ದು. ಈಗಾಗಲೇ ಅವರು ಎರಡು ಡೋಸ್ ಪಡೆದು 6 ತಿಂಗಳ ಮೇಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನುಗುಣವಾಗಿ ಕ್ರಮ ವಹಿಸಲಾಗುವುದು ಎಂದರು