Saturday, July 2, 2022
Home ಸಮಾಚಾರ ಪ್ರಾಮಾಣಿಕತೆಗೆ ಒಲಿದುಬಂದ ಮಂತ್ರಿಗಿರಿ

ಪ್ರಾಮಾಣಿಕತೆಗೆ ಒಲಿದುಬಂದ ಮಂತ್ರಿಗಿರಿ

ಪ್ರಾಮಾಣಿಕತೆಗೆ ಒಲಿದುಬಂದ ಮಂತ್ರಿಗಿರಿ

(ಸುದ್ದಿಕಿರಣ ವರದಿ)
ಉಡುಪಿ: ಸಿಂಪಲ್ ಶ್ರೀನಿವಾಸ ಎಂದು ವಿರೋಧ ಪಕ್ಷದವರಿಂದಲೂ ಕರೆಯಲ್ಪಡುವ ಅಜಾತಶತ್ರು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಈಗಾಗಲೇ ಬಿಜೆಪಿ ಸರಕಾರದಲ್ಲಿ ಎರಡು ಬಾರಿ ಸಚಿವ ಸ್ಥಾನ ಪಡೆದಿದ್ದು, ಇದೀಗ ಮತ್ತೆ ಸಚಿವರಾಗಿ ಬೊಮ್ಮಾಯಿ ಸಂಪುಟ ಸೇರಿದ್ದಾರೆ.

ಅವರು ಈ ಹಿಂದೆ ಜಗದೀಶ ಶೆಟ್ಟರ್ ಮತ್ತು ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು.

ಕಡಲತಡಿಯ ಭಾರ್ಗವ ಕೋಟ ಶಿವರಾಮ ಕಾರಂತ ಅವರಿಂದ ಪ್ರಭಾವಿತರಾಗಿ, ಡಾ. ವಿ. ಎಸ್. ಆಚಾರ್ಯ ಅವರ ಗರಡಿಯಲ್ಲಿ ಪಳಗಿದ ಕೋಟ, ಪ್ರಾಮಾಣಿಕ ರಾಜಕಾರಣಿ ಎಂದೇ ಜನಜನಿತ. ಕೆದರಿದ ಕೂದಲು, ಕೃಶ ಶರೀರ, ಹಿರಿ- ಕಿರಿಯರೆನ್ನದೆ ಎಲ್ಲರಲ್ಲೂ ಸಲುಗೆಯಿಂದ ಮಾತನಾಡುವ ಸಹೃದಯತೆ ಅವರನ್ನು ಮತ್ತೆ ಸಚಿವರನ್ನಾಗಿಸಿದೆ. ಅವರೇನು ಎಂಬುದನ್ನು ಪಕ್ಷ ಹೈಕಮಾಂಡ್ ಸರಿಯಾಗಿ ಅರ್ಥೈಸಿಕೊಂಡಿದೆ. ಹಾಗಾಗಿಯೇ ಮೂರು ಬಾರಿ ಸಚಿವರಾಗುವ ಅವಕಾಶವನ್ನು ಕೋಟ ಅವರಿಗೆ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನೂತನ ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

2008ರಲ್ಲಿ ಪ್ರಥಮ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡ ಕೋಟ ಶ್ರೀನಿವಾಸ, ಪೂಜಾರಿ 2012ರಲ್ಲಿ ಮುಜರಾಯಿ ಇಲಾಖೆ ಸಚಿವರಾಗಿ ನೇಮಕಗೊಂಡರು ಬಳಿಕ 2016ರಲ್ಲಿ ಮತ್ತೆ ವಿಧಾನ ಪರಿಷತ್ ಸದಸ್ಯರಾಗಿ ಪುನರಾಯ್ಕೆಗೊಂಡು 2018ರಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯರಾಗಿ ಆಯ್ಕೆಯಾದರು.

2019ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಧಾರ್ಮಿಕ ದತ್ತಿ, ಮೀನುಗಾರಿಕೆ, ಒಳನಾಡು ಬಂದರು ಮತ್ತು ಜಲಸಾರಿಗೆ ಸಚಿವರಾಗಿ ನಿಯುಕ್ತರಾದರು. ಖಾತೆ ಬದಲಾವಣೆ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆ ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ಆಯ್ಕೆಯಾಗಿದ್ದರು.

ಶೆಟ್ಟರ್ ಸಂಪುಟದಲ್ಲಿ ಮುಜರಾಯಿ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಅನಾವೃಷ್ಟಿ ತಲೆದೋರಿದ್ದ ಸಂದರ್ಭದಲ್ಲಿ ದೇವಳಗಳಲ್ಲಿ ಸರಕಾರಕ್ಕೆ ಹೊರೆಯಾಗದಂತೆ ಮಳೆಗಾಗಿ ವಿಶೇಷ ಪೂಜೆ, ಪರ್ಜನ್ಯ ಜಪ ಇತ್ಯಾದಿ ನಡೆಸಲು ಸೂಚಿಸಿದ್ದರು. ಮಳೆ ಬಂದ ಪರಿಣಾಮವಾಗಿ ಮಳೆ ಮಂತ್ರಿ ಎಂಬ ಖ್ಯಾತಿಗೂ ಪಾತ್ರರಾಗಿದ್ದರು.
ಯಡಿಯೂರಪ್ಪ ಸಂಪುಟದಲ್ಲಿ ಸಪ್ತಪದಿ ಯೋಜನೆ ಆರಂಭಿಸುವ ಮೂಲಕ ಸರಳ, ಸಾಮೂಹಿಕ ವಿವಾಹಕ್ಕೆ ಉತ್ತೇಜನ ನೀಡಿ, ಅದೆಷ್ಟೋ ಬಡ ಹೆಮ್ಮಕ್ಕಳ ಮನ ಮನೆ ಬೆಳಗಿದ ಸಚಿವ ಎಂಬ ಖ್ಯಾತಿಗೂ ಪಾತ್ರರಾಗಿದ್ದರು.

ಸುಮಾರು 4 ದಶಕಗಳ ರಾಜಕೀಯ ಜೀವನದಲ್ಲಿರುವ ಕೋಟ, ತಳಹಂತದಿಂದ ಈ ಮಟ್ಟಕ್ಕೆ ಬೆಳೆದವರು. ಗ್ರಾ.ಪಂ. ಸದಸ್ಯನಾಗಿ, ತಾಲೂಕು ಬೋರ್ಡ್ ಸದಸ್ಯನಾಗಿ, ಜಿ. ಪಂ. ಸದಸ್ಯನಾಗಿ ಕಾರ್ಯನಿರ್ವಹಿಸಿದವರು. ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿದ್ದರು.

ಕೃಷಿಕ ಕುಟುಂಬದಿಂದ ಬಂದ ಅವರು, ವೃತ್ತಿಯಲ್ಲಿ ಛಾಯಾಗ್ರಾಹಕರೂ ಆಗಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!