Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಕನಕದಾಸರದು ಜೀವನ ಪರ ನಿಲುವು

ಕನಕದಾಸರದು ಜೀವನ ಪರ ನಿಲುವು

ಉಡುಪಿ: ಕನಕದಾಸರು ಇತರ ದಾಸವರೇಣ್ಯರಿಗಿಂತ ಭಿನ್ನತೆ ಹೊಂದಿದ್ದಾರೆ. ಲೌಕಿಕವನ್ನು ಆಳವಾಗಿ ಅಧ್ಯಯನ ಮಾಡಿದ ಅವರು, ಜೀವನ ಪರ ನಿಲುವು ಹಾಗೂ ಸ್ವತಂತ್ರ ಮನೋಧರ್ಮ ಅವರ ವೈಶಿಷ್ಟ್ಯ ಎಂದು ಉಪನ್ಯಾಸಕ ಡಾ| ಎಸ್. ಆರ್. ಅರುಣ್ ಕುಮಾರ್ ಹೇಳಿದರು.

ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಕನಕದಾಸ ಅಧ್ಯಯನ ಸಂಶೋಧನ ಪೀಠ ಆಶ್ರಯದಲ್ಲಿ ಪ್ರಾಯೋಜಕತ್ವದಲ್ಲಿ ಎಂಜಿಎಂ ಕಾಲೇಜು ಆವರಣದ ಗೀತಾಂಜಲಿ ಸಭಾಂಗಣದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.

ಕನಕನ ಚಿಂತನೆಗಳ ಉದ್ದೇಶ ದೇವರ ಸಾಕ್ಷಾತ್ಕಾರವಲ್ಲ, ಬದಲಿಗೆ ದೇವರನ್ನು ಕಾಣಲು ಬೇಕಾದ ಮನುಷ್ಯನ ಮನೋಧರ್ಮದ ತಯಾರಿ. ಬಹುತ್ವದ ಮುಖ ಹೊಂದಿದ ಕನಕದಾಸರ ಕಾವ್ಯ ಒಳತುಡಿತಗಳಿಗೆ ಧ್ವನಿ ನೀಡಿ, ಅನೇಕ ಸಮಸ್ಯೆಗಳಿಗೆ ಉತ್ತರದಾಯಿಯಾಯಿತು ಎಂದರು. ಸಮಾನತೆ ಹಾಗೂ ಸಮನ್ವಯತ್ವದ ಗ್ರಹಿಕೆ ಕನಕದಾಸರ ಕಾವ್ಯದ ತತ್ವ ಎಂದವರು ವಿಶ್ಲೇಷಿಸಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ಕನಕದಾಸ ಅಧ್ಯಯನ ಸಂಶೋಧನ ಪೀಠ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ, ಭಕ್ತಿ ಪರಂಪರೆಯ ಕವಿಯಾಗಿ ಬದುಕು ಸಾಗಿಸಿದ ಕನಕದಾಸರು ಸತ್ಯದ ಜೊತೆಗೆ ನೇರ ಅನುಸಂಧಾನ ಇರಿಸಿಕೊಂಡವರು. ಪರಂಪರೆಯ ಒಳಗಿದ್ದುಕೊಂಡೇ ಪರಂಪರೆಯ ಪಿಡುಗುಗಳನ್ನು ಟೀಕಿಸಿದವರು. ಸಾಮಾಜಿಕ, ಆಧ್ಯಾತ್ಮಿಕ ತತ್ವದ ಮೂಲಕ ಸಮಾಜಕ್ಕೆ ದಾರಿದೀಪವಾಗಿ ನಿಂತ ಅವರನ್ನು ಸ್ಮರಿಸಿಕೊಳ್ಳಬೇಕಾಗಿದೆ ಎಂದರು.

ಎಂ.ಜಿ.ಎಂ. ಕಾಲೇಜು ಪ್ರಾಂಶುಪಾಲ ಡಾ| ಎಂ. ಜಿ. ವಿಜಯ ಇದ್ದರು. ಪ್ರೀತಂ ಅಡಿಗ ಕನಕ ಕೀರ್ತನೆ ಹಾಡಿದರು. ಕೇಂದ್ರದ ಆಡಾಳಿತಾಧಿಕಾರಿ ಪ್ರೊ. ಎಂ. ಎಲ್. ಸಾಮಗ ವಂದಿಸಿದರು. ಸುಶ್ಮಿತಾ ಎ. ನಿರೂಪಿಸಿದರು.

ಇದೇ ಸಂದರ್ಭದಲ್ಲಿ ರಾಘವೇಂದ್ರ ಆಚಾರ್ಯ ಮತ್ತು ಬಳಗದವರಿಂದ ಕನಕ ಗೀತೆ ಗಾಯನ ಕಾರ್ಯಕ್ರಮ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!