Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಕನಕ ಜಯಂತಿ ನಾಡಹಬ್ಬವಾಗಲಿ

ಕನಕ ಜಯಂತಿ ನಾಡಹಬ್ಬವಾಗಲಿ

ಉಡುಪಿ: ಭಕ್ತ ಮತ್ತು ದೇವರ ನಡುವಿನ ಅವಿನಾಭಾವ ಸಂಬಂಧ ಸಾರಿದ ಭಕ್ತ ಕನಕದಾಸರ ಜಯಂತಿ ಪ್ರತೀ ಮನೆ ಮನಗಳಲ್ಲಿ ಆಚರಿಸುವ ಮೂಲಕ ನಾಡಹಬ್ಬವಾಗಬೇಕು ಎಂದು ಗೃಹಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ. ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಕನಕದಾಸರ ಸೂಕ್ಷ್ಮತೆ, ಪರಿವರ್ತನೆ ನಿಯಮ ಸೂಚಿಸುತ್ತದೆ. ನಾಗರಿಕತೆ ಬದಲಾದರೂ ಸಂಸ್ಕಾರ ಮರೆಯಬಾರದು. ಸಂಸ್ಕಾರ ಉಳಿದರೆ ಮಾತ್ರ ಧರ್ಮ ಉಳಿಯುತ್ತದೆ. ಧರ್ಮದಿಂದ ನ್ಯಾಯ, ನೀತಿ ಇರಲು ಸಾಧ್ಯ. ಅದನ್ನೇ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜನಮಾನಸದಲ್ಲಿ ಸದಾ ಪ್ರಸ್ತುತರಾಗಿದ್ದಾರೆ ಎಂದರು.
ತನ್ನ ಕ್ಷೇತ್ರದಲ್ಲಿ ಬರುವ ಕನಕ ಹುಟ್ಟಿದ ಸ್ಥಳವಾದ ಬಾಡವನ್ನು 14 ಕೋ. ರೂ., ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರತಿನಿತ್ಯ ಸಾವಿರಾರು ಮಂದಿ ವಿದ್ಯಾರ್ಥಿಗಳು, ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಕನಕನ ಆದರ್ಶ ನಮ್ಮೆಲ್ಲರಲ್ಲಿ ಬರಬೇಕು ಎಂದವರು ಆಶಿಸಿದರು.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಕನಕ ಅಧ್ಯಯನ ಪೀಠ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಅವರು ಕನಕದಾಸರ ಬಗ್ಗೆ ಉಪನ್ಯಾಸ ನೀಡಿದರು.
ಶಾಸಕರಾದ ಕೆ. ರಘುಪತಿ ಭಟ್ ಮತ್ತು ಲಾಲಾಜಿ ಆರ್. ಮೆಂಡನ್, ಜಿ. ಪಂ. ಅಧ್ಯಕ್ಷ ದಿನಕರ ಬಾಬು, ಕನಕ ಸಮಾಜ ಸಂಘದ ಮುಖಂಡ ಮೇಟಿ ಮುದಿಯಪ್ಪ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ.ಪಂ. ಸಿಇಒ ಡಾ. ನವೀನ ಭಟ್ ವೈ, ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರಾಯ್, ಎಸ್.ಪಿ. ವಿಷ್ಣುವರ್ಧನ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!