Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಸಮಾಜದಲ್ಲಿ ಕರುಣೆ, ಮಾನವೀಯತೆ ಹೆಚ್ಚಾಗಬೇಕು

ಸಮಾಜದಲ್ಲಿ ಕರುಣೆ, ಮಾನವೀಯತೆ ಹೆಚ್ಚಾಗಬೇಕು

ಸುದ್ದಿಕಿರಣ ವರದಿ
ಸೋಮವಾರ, ಮೇ 9

ಸಮಾಜದಲ್ಲಿ ಕರುಣೆ, ಮಾನವೀಯತೆ ಹೆಚ್ಚಾಗಬೇಕು
ಉಡುಪಿ: ಸಮಾಜದಲ್ಲಿ ಕರುಣೆ ಮತ್ತು ಮಾನವೀಯ ವ್ಯಕ್ತಿತ್ವ ಹೆಚ್ಚಿರಬೇಕು. ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ. ಮಾನವ ಕರುಣೆ ಕಳೆದುಕೊಂಡಾಗ ಸ್ವಾರ್ಥ ಭಾವನೆ ಅಧಿಕವಾಗುತ್ತದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.

ಸೋಮವಾರ ಇಲ್ಲಿನ ಭಾರತೀಯ ರೆಡ್ ಕ್ರಾಸ್ ಭವನದಲ್ಲಿ ನಡೆದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹಿರಿಯರ ಮೇಲ್ಪಂಕ್ತಿ
ನಮ್ಮ ಹಿರಿಯರು ಹೆಚ್ಚಿನ ಮಾನವೀಯ ಮತ್ತು ಕರುಣೆಯ ಗುಣ ಹೊಂದಿದ್ದು, ಹಲವು ಜನಪರ ಕಾರ್ಯಗಳನ್ನು ಮಾಡಿ, ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅವುಗಳನ್ನು ಮುಂದುವರಿಸುವುದು ನಮ್ಮ ಕರ್ತವ್ಯವಾಗಬೇಕು.

ಮನುಷ್ಯ ಕರುಣೆ ಮತ್ತು ಮಾನವೀಯ ಗುಣ ಕಳೆದುಕೊಂಡಾಗ ಆತನಲ್ಲಿ ಸ್ವಾರ್ಥಪರತೆ ಹೆಚ್ಚಾಗಿ ಬದುಕಿನಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಾನೆ.

ಆದ್ದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಮಾನವೀಯ ಗುಣಗಳಿಂದ ಕಾರ್ಯನಿರ್ವಹಿಸಬೇಕು ಎಂದರು.

ಮಣ್ಣಿನ ಗುಣ
ನಮ್ಮ ದೇಶದ ಮಣ್ಣಿನಲ್ಲಿ ಮಾನವೀಯ ಗುಣಗಳಿದ್ದು, ಜಗತ್ತಿನ ಎಲ್ಲಾ ಜಾತಿಗಳನ್ನು ನಾವು ಪ್ರೀತಿಸುತ್ತೇವೆ. ದೇಶದಲ್ಲಿ ಜಾತಿಗಳ ನಡುವೆ ಯಾವುದೇ ದ್ವೇಷದ ಭಾವನೆ ಮೂಡದಂತೆ ಮತ್ತು ದ್ವೇಷವನ್ನು ವಿರೋಧಿಸುವ ಶಕ್ತಿ ಈ ಮಣ್ಣಿನಲ್ಲಿದೆ.

ಇಂಥ ಮಾನವೀಯ ಗುಣಗಳಿಂದ ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಅಂಗಾರ ಹೇಳಿದರು.

ಸಮಾನ ಸಮಾಜಸೇವೆ ಅಗತ್ಯ
ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಎಸ್. ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಸ್ವತಂತ್ರವಾಗಿರಬೇಕು. ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ಇದು ಎಲ್ಲರಿಗೂ ಸಮಾಜಸೇವೆ ಕಲ್ಪಿಸಬೇಕು.

ಮಾನವೀಯ ಮೌಲ್ಯಗಳನ್ನು ಒಳಗೊಂಡು ಕಾರ್ಯನಿರ್ವಹಿಸಬೇಕು ಎಂದರು.

ಸನ್ಮಾನ
ವಿವಿಧ ಕ್ಷೇತ್ರಗಳ ಸಾಧಕರಾದ ಅಂಬಲಪಾಡಿ ದೇವಾಲಯದ ಕ್ಷೇತ್ರಾಧಿಕಾರಿ ಡಾ. ವಿಜಯ ಬಲ್ಲಾಳ್, ಪ್ರಾಂಶುಪಾಲ ಡಾ| ಗಣನಾಥ ಎಕ್ಕಾರ್, ವಿಶ್ರಾಂತ ಪ್ರಾಂಶುಪಾಲೆ ಡಾ| ಮಾಧವಿ ಭಂಡಾರಿ, ನಿವೃತ್ತ ಮುಖ್ಯ ಶಿಕ್ಷಕ ಮುರಳಿ ಕಡೆಕಾರ್, ಸುಧಾಕರ ಶೆಟ್ಟಿ, ಭುಜಂಗ ಶೆಟ್ಟಿ, ಶರಾವತಿ ಅವರನ್ನು ಸನ್ಮಾನಿಸಲಾಯಿತು.

ಕೊರೊನಾ ಸಂತ್ರಸ್ತ ವಿವಿಧ ಫಲಾನುಭವಿಗಳಿಗೆ ಸವಲತ್ತು ಹಾಗೂ ಶ್ರವಣ ಸಾಧನ ಉಪಕರಣ ವಿತರಿಸಲಾಯಿತು.

ರೆಡ್ ಕ್ರಾಸ್ ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಖಜಾಂಚಿ ರಮಾದೇವಿ, ಕರ್ನಾಟಕ ರಾಜ್ಯ ಶಾಖೆ ಮತ್ತು ಉಡುಪಿ ಜಿಲ್ಲಾ ಶಾಖೆ ಆಡಳಿತ ಮಂಡಳಿ ಸದಸ್ಯ ವಿ. ಜಿ. ಶೆಟ್ಟಿ, ಚಂದ್ರಶೇಖರ್ ಮೊದಲಾದವರಿದ್ದರು.
ಉಡುಪಿ ರೆಡ್ ಕ್ರಾಸ್ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಿ.ಡಿ.ಆರ್.ಸಿ ನೋಡೆಲ್ ಅಧಿಕಾರಿ ಜಯಶ್ರೀ ನಿರೂಪಿಸಿದರು. ರತ್ನಾಕರ ಶೆಟ್ಟಿ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!