ಸುದ್ದಿಕಿರಣ ವರದಿ
ಗುರುವಾರ, ಫೆಬ್ರವರಿ 24
ಉಕ್ರೇನ್: ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ
ಬೆಂಗಳೂರು: ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಭಾರತದ ವಿದ್ಯಾರ್ಥಿಗಳು ವಿಮಾನ ನಿಲ್ದಾಣಕ್ಕೆ ತಲುಪುವಾಗ ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಾರಂಭವಾಗಿದ್ದರಿಂದ ಸುಮಾರು 100 ಮಂದಿ ವಿದ್ಯಾರ್ಥಿಗಳು ಎರಡು ಬಸ್ ಗಳಲ್ಲಿ ಸಿಲುಕಿಕೊಂಡಿದ್ದಾರೆ.
ಅವರಲ್ಲಿ 10ಕ್ಕಿಂತ ಹೆಚ್ಚು ಮಂದಿ ಕನ್ನಡಿಗರಿದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೂ ನಿರಂತರ ಸಂಪರ್ಕದಲ್ಲಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಉಕ್ರೇನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿರಲು ಭಾರತೀಯ ರಾಯಭಾರ ಕಚೇರಿ ಸೂಕ್ತ ಮಾರ್ಗದರ್ಶನ ನೀಡಿದೆ. ವಿಮಾನಗಳು ಪುನಃ ಪ್ರಾರಂಭವಾದಾಗ ವಿದ್ಯಾರ್ಥಿಗಳನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೇಂದ್ರ ವಿದೇಶಾಂಗ ಸಚಿವರೊಂದಿಗೂ ಈ ಬಗ್ಗೆ ಚರ್ಚಿಸಲಾಗುವುದು ಎಂದು ಸಿಎಂ ತಿಳಿಸಿದರು.
ಉಕ್ರೇನ್ ನಲ್ಲಿ ಯುದ್ಧದ ಛಾಯೆಯಿಂದಾಗಿ ಕಳೆದ ವಾರವೇ 200 ಮಂದಿ ಭಾರತೀಯರು ಮರಳಿದ್ದರು. ಆಗ ವಿದ್ಯಾರ್ಥಿಗಳಿಗೆ ಮಾಹಿತಿ ಇರಲಿಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ವಿದ್ಯಾರ್ಥಿಗಳು ಬ್ಯಾಚ್ ಗಳಲ್ಲಿ ಭಾರತಕ್ಕೆ ಮರಳುತ್ತಿದ್ದು, ಈ ಬ್ಯಾಚ್ ಕಡೆಯದಾಗಿತ್ತು ಎಂದರು