ಸುದ್ದಿಕಿರಣ ವರದಿ
ಸೋಮವಾರ, ಜನವರಿ 17
ಸ್ತಬ್ಧಚಿತ್ರ ತಿರಸ್ಕಾರ: ಕಾಂಗ್ರೆಸ್ ಖಂಡನೆ
ಉಡುಪಿ: ಗಣರಾಜ್ಯೋತ್ಸವ ಪೆರೇಡಿನಲ್ಲಿ ವಿಶ್ವಮಾನವತೆಯ ಪ್ರತಿಪಾದಕ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ತಿರಸ್ಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಬಣ್ಣ ಬಯಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಕೇಂದ್ರ ಸರಕಾರದ ನಿಲುವು ಖಂಡನೀಯ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿಕೊಂಡು ಬಂದಿದ್ದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವ ಕುಟುಂಬ ಚಿಂತನೆಯ ಸಿದ್ಧಾಂತ ವರ್ತಮಾನದ ಆದ್ಯತೆಯಾಗಿದೆ. ಆದರೆ, ಆಳುವ ಸರಕಾರ ಅವರ ಸ್ತಬ್ಧಚಿತ್ರವನ್ನು ತಿರಸ್ಕರಿಸುವ ಮೂಲಕ ತಾನು ಈ ಸಿದ್ಧಾಂತದ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ. ಅಷ್ಟೇ ಅಲ್ಲದೆ, ಜನರ ನಂಬಿಕೆಗೆ ದ್ರೋಹ ಮಾಡಿದೆ ಎಂದು ಅಶೋಕ್ ಹೇಳಿದ್ದಾರೆ.
ಕಳೆದ ಆರೇಳು ವರ್ಷದಿಂದ ದೇಶಾದ್ಯಂತ ನಡೆದ ದಲಿತರು, ಹಿಂದುಳಿದವರು, ಮುಗ್ಧ ಮಹಿಳೆಯರು, ಬುದ್ದಿಜೀವಿಗಳು ಹಾಗೂ ಸಾಹಿತಿಗಳ ಮೇಲಿನ ದಾಳಿಗಳು, ಅವರ ಮೇಲೆ ಹೊರೆಸಿದ ದೇಶದ್ರೋಹದ ಪ್ರಕರಣಗಳು ಈ ಸರಕಾರದ ಮೂಲಭೂತವಾದಿ ಸಿದ್ಧಾಂತಕ್ಕೆ ಹಿಡಿದ ಕನ್ನಡಿ ಎಂದು ಅಶೋಕ್ ಕುಮಾರ್ ಕೊಡವೂರು ವಿಶ್ಲೇಷಿಸಿದ್ದಾರೆ