Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಹಿಳೆಯರ ಸಮಸ್ಯೆಗೆ ಕಾರಣ ಹುಡುಕುವ ಪ್ರಯತ್ನವಾಗಲಿ

ಮಹಿಳೆಯರ ಸಮಸ್ಯೆಗೆ ಕಾರಣ ಹುಡುಕುವ ಪ್ರಯತ್ನವಾಗಲಿ

ಸುದ್ದಿಕಿರಣ ವರದಿ
ಸೋಮವಾರ, ಫೆಬ್ರವರಿ 7

ಮಹಿಳೆಯರ ಸಮಸ್ಯೆಗೆ ಕಾರಣ ಹುಡುಕುವ ಪ್ರಯತ್ನವಾಗಲಿ
ಉಡುಪಿ: ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಆ ಸಮಸ್ಯೆಗಳಿಗೆ ಕಾರಣ ಏನೆಂದು ಪತ್ತೆಹಚ್ಚುವ ಕೆಲಸವಾಗಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು

ನಗರದ ಬ್ರಹ್ಮಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ ಉಡುಪಿ ಹಾಗೂ ಶಿಶು ಅಭಿವೃದ್ಧಿ ಯೋಜನೆ ಉಡುಪಿ ಮತ್ತು ಕಾರ್ಕಳ ಸಹಯೋಗದಲ್ಲಿ ನಡೆದ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ದೌರ್ಜನ್ಯಕ್ಕೊಳಗಾದ ಯಾವುದೇ ಮಹಿಳೆ ಸಂಬಂಧಪಟ್ಟ ವ್ಯಾಪ್ತಿಯ ಸಖೀ ಒನ್ ಸ್ಟಾಪ್ ಸೆಂಟರ್ ಮೂಲಕ ನೆರವು ಪಡೆದುಕೊಳ್ಳಬಹುದು. ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರುವುದು ತಪ್ಪೆಂಬ ಕೀಳರಿಮೆಯಿಂದ ಹೊರಬಂದು ತಮಗಾದ ಅನ್ಯಾಯದ ವಿರುದ್ಧ ನ್ಯಾಯ ಪಡೆಯಬಹುದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳೂ ಮಹಿಳೆಯರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಿಳೆಯರಿಗೆ ಕಾನೂನಿನ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಮರ್ಿಳಾ ಎಸ್. ಮಾತನಾಡಿ, ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅದನ್ನು ತಳ ಮಟ್ಟದಲ್ಲಿಯೇ ತಡೆಯುವ ಕಾರ್ಯವಾಗಬೇಕು.

ಮಹಿಳೆಯರು ಮತ್ತು ಮಕ್ಕಳನ್ನು ಸಾಗಾಟ ಮಾಡಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುವ ಕಾರ್ಯವಾಗುತ್ತಿದೆ. ಈ ಪಿಡುಗನ್ನು ನಿಯಂತ್ರಿಸಲು ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸಬೇಕು.

ಸಾಂತ್ವನ ಕೇಂದ್ರ, ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ಜಾಲ ಪತ್ತೆಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹಿಳೆಯರ ಅಕ್ರಮ ಸಾಗಾಣಿಕೆ ಕಂಡು ಬಂದಲ್ಲಿ 1091 ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ಕಂಡುಬಂದಲ್ಲಿ 1098 ಸಹಾಯವಾಣಿಗೆ ದೂರು ನೀಡಬೇಕು ಎಂದರು.

ಕಾರ್ಯಾಗಾರದಲ್ಲಿ ಸಂಪನ್ಮೂಲವ್ಯಕ್ತಿ ಮಹಿಳಾ ಆರಕ್ಷಕಿ ವಯೋಲೆಟ್ ಫೆಮಿನಾ ಹಾಗೂ ಹಿರಿಯ ವಕೀಲೆ ಮುಂಡ್ಕೂರು ವಿನಯ ಆಚಾರ್ಯ ಇದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಸ್ವಾಗತಿಸಿ, ಹಿರಿಯ ಮೇಲ್ವಿಚಾರಕಿ ಶಾಂತಿ ಪ್ರಭು ವಂದಿಸಿದರು. ಮೇಲ್ವಿಚಾರಕಿ ಸಿಂಧು ಭೋಜ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!