ಉಡುಪಿ: ಸರ್ಕಾರದಿಂದ ಖೈದಿಗಳಿಗೆ ಬರುವ ಸವಲತ್ತು ನೀಡಲಾಗುತ್ತಿಲ್ಲ ಎಂದು ಜೈಲು ಸೂಪರಿಂಟೆಂಡೆಂಟ್ ವಿರುದ್ಧ ಆಕ್ರೋಶಗೊಂಡಿರುವ ಜಿಲ್ಲಾ ಕಾರಾಗೃಹ ವಾಸಿ ಖೈದಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಘಟನೆ ಶನಿವಾರ ನಡೆದಿದೆ.
ಹಿರಿಯಡ್ಕ ಸಮೀಪದ ಕಾಜರಗುತ್ತುನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳು ಉಪವಾಸ ನಡೆಸಿ ಉಡುಪಿ ಜೈಲು ಸೂಪರಿಂಟೆಂಡೆಂಟ್ ಶ್ರೀನಿವಾಸ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜೈಲು ಸೂಪರಿಂಟೆಂಡೆಂಟ್ ಮತ್ತು ಸಿಬ್ಬಂದಿ ಕಠಾರಿ ಎಂಬಾತ ಖೈದಿಗಳಿಂದ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.
ಈ ಕುರಿತು ಶಾಸಕರು ಮತ್ತು ವಕೀಲರು ಜೈಲಿಗೆ ಬಂದು ಪರಿಶೀಲನೆ ನಡೆಸಬೇಕು ಎಂದು ಖೈದಿಗಳು ಆಗ್ರಹಿಸಿದ್ದಾರೆ.
ಜೈಲಿನಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಿಸಲಾಗುತ್ತಿದೆ. ಕಾನೂನು ಪ್ರಕಾರ ವಾರಕ್ಕೊಮ್ಮೆ ಮೀನು, ಮಟನ್ ಕೊಡಬೇಕು. ಆದರೆ, ಇಲ್ಲಿ ಕೋಳಿ ಕಾಲು ಬೇಯಿಸಿ ಸಾರು ಮಾಡಿ ಹಾಕುತ್ತಾರೆ. ಖೈದಿಗಳಿಗೆ ಬರುವ ಪಡಿತರ ಜೈಲು ಸೂಪರಿಂಟೆಂಡೆಂಟ್ ಮನೆ ಸೇರುತ್ತಿದೆ ಎಂದೂ ಖೈದಿಗಳು ಆರೋಪಿಸಿದ್ದಾರೆ