Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಕಾರ್ಕಳ ಶಾಸಕ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ

ಕಾರ್ಕಳ ಶಾಸಕ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ

ಕಾರ್ಕಳ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಸ್ಥಳೀಯ ಶಾಸಕ ಸುನಿಲ್ ಕುಮಾರ್ ಅವರ ಖಾಸಗಿ ಕಚೇರಿ ವಿಕಾಸದ ಮುಂದೆ ಜನಾಗ್ರಹ ಪ್ರತಿಭಟನೆ ನಡೆಯಿತು. ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಶಾಸಕರಿಗೆ ಮನವಿ ಮಾಡುವ ಕಾಂಗ್ರೆಸ್ ಪ್ರಯತ್ನಕ್ಕೆ ಪೊಲೀಸರು ತಡೆಯೊಡ್ಡಿದರು.

ಇದೆ ವೇಳೆ ಕಾಂಗ್ರೆಸ್ ಮುಖಂಡರು ಮತ್ತು ಪೊಲೀಸರ ನಡುವೆ ಬಿರುಸಿನ ಮಾತು ನಡೆದವು.

ಶಾಸಕರ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮನವಿ ನೀಡಲು ಕಚೇರಿ ಸಮೀಪ ತೆರಳಲು ಯತ್ನಿಸಿದಾಗ ಪೊಲೀಸರು ತಡೆದರು. ವೃತ್ತನಿರೀಕ್ಷಕ ಸಂಪತ್ ಕುಮಾರ್, ವಿಕಾಸ ಕಚೇರಿ ಶಾಸಕರ ಖಾಸಗಿ ಕಚೇರಿ. ಹಾಗಾಗಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಜೊತೆಗೆ ಕೊರೊನಾ ಸಂಕಷ್ಟ ಸಮಯದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪ್ರತಿಭಟನಾ ನಿರತರಲ್ಲಿ ಮನವಿ ಮಾಡಿದರು. ಅದಕ್ಕೆ ಕಾಂಗ್ರೆಸ್ ಮುಖಂಡರಿಂದ ಪ್ರತಿರೋಧ ವ್ಯಕ್ತವಾಯಿತು.

ಶಾಸಕರು ಜನರ ಸಮಸ್ಯೆ, ಸಂಕಷ್ಟ, ಬೇಡಿಕೆ ಈಡೇರಿಸಲು ಕ್ರಮ ವಹಿಸಬೇಕು. ಇದು ಜನಾಗ್ರಹ. ಶಾಸಕರು ಕಚೇರಿಯೊಳಗೆ ಇರುವುದರಿಂದ ನಮಗೆ ಅವಕಾಶ ಮಾಡಿಕೊಡಬೇಕು. ಕೋವಿಡ್ ನಿಯಮ ಉಲ್ಲಂಘಿಸಿ ಬಿಳಿಬೆಂಡೆ ವಿತರಣೆ ಮಾಡಲು ಬಿಜೆಪಿಯವರಿಗೆ ಅವಕಾಶ ಕಲ್ಪಿಸುವುದಾದರೆ ನಮಗೇಕೆ ಪ್ರತಿಭಟನೆ, ಜನ ಸೇರಲು ನಿರಾಕರಿಸುತ್ತೀರಿ ಎಂದು ಕಾಂಗ್ರೆಸ್ ಮುಖಂಡರಾದ ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಶುಭದಾ ರಾವ್, ಬಿಪಿನ್ ಚಂದ್ರಪಾಲ್ ನಕ್ರೆ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿ ಶಾಸಕರ ಕಚೇರಿ ಮುಂಭಾಗದ 25 ಮೀ. ದೂರದಲ್ಲಿ ಪ್ರತಿಭಟನೆ ಸಭೆ ನಡೆಸಿ ಜನರ ಬೇಡಿಕೆಗಳಿಗೆ ಆಗ್ರಹಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಮೀಸಲು ಪೊಲೀಸರ ಸಹಿತ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕೇಂದ್ರ ಮತ್ತು ರಾಜ್ಯ ಸರಕಾರದ ಜನ ವಿರೋಧಿ ನೀತಿ, ಆಡಳಿತ ವೈಫಲ್ಯ ಮತ್ತು ಲಾಕ್ ಡೌನ್ ನಿಂದ ಸಂತ್ರಸ್ತರಾದ ಕಾರ್ಮಿಕ, ಶ್ರಮಿಕ ವರ್ಗದವರಿಗೆಂದು ಘೋಷಿಸಿರುವ ಪ್ಯಾಕೇಜ್ ಪಡೆಯಲು ವಿಧಿಸಲಾಗಿರುವ ಕಠಿಣ ಷರತ್ತುಗಳ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ವಿನ ಪ್ರಮಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!