ಸುದ್ದಿಕಿರಣ ವರದಿ
ಕುಂದಾಪುರ, ಫೆಬ್ರವರಿ 2
ಕುಂದಾಪುರಕ್ಕೂ ವಿಸ್ತರಿಸಿದ ಹಿಜಾಬ್ ವಿವಾದ
ಕುಂದಾಪುರ: ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮತ್ತಷ್ಟು ಜಠಿಲವಾಗಿದ್ದು ಉಡುಪಿಗೆ ಸೀಮಿತವಾಗಿದ್ದ ವಿವಾದ ಈಗ ಕುಂದಾಪುರ ತಾಲೂಕಿಗೂ ವಿಸ್ತರಿಸಿದೆ.
ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬರುತ್ತಿರುವ 27 ವಿದ್ಯಾರ್ಥಿನಿಯರಿಗೆ ಹಿಂದೂ ವಿದ್ಯಾರ್ಥಿಗಳು ಕೆಸರಿ ಶಾಲು ಧರಿಸಿಕೊಂಡು ಬರುವುದರ ಮೂಲಕ ಕೌಂಟರ್ ಕೊಟ್ಟನೀಡಿದ್ದರು
ಬುಧವಾರ ಕಾಲೇಜಿನ 40 ಕ್ಕೂ ಅಧಿಕ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿ ಬಂದಿದ್ದು ಇದರಿಂದ ಕಾಲೇಜು ಆವರಣದಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು. ಈ ಕುರಿತು ಮಾಹಿತಿ ಪಡೆದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾಲೇಜಿಗೆ ಆಗಮಿಸಿ ಸಭೆ ನಡೆಸಿದರು. ಸಭೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರನ್ನು ಮನವೊಲಿಸಲು ಪ್ರಯತ್ನಿಸಿದರು ಸಾಧ್ಯವಾಗದೆ ಒಮ್ಮತಕ್ಕೆ ಬರಲು ಸಭೆ ವಿಫಲವಾಗಿದೆ.
ಕುಂದಾಪುರದ ಜ್ಯೂನಿಯರ್ ಕಾಲೇಜು (ಸರಕಾರಿ ಪದವಿ ಕಾಲೇಜು)ಗೆ ಒಂದಷ್ಟು ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿ ಬರುತ್ತಿರುವುದನ್ನು ವಿರೋಧಿಸಿ ಮತ್ತೊಂದಷ್ಟು ವಿದ್ಯಾರ್ಥಿಗಳು ಬುಧವಾರ ಕೇಸರಿ ಶಾಲು ಧರಿಸಿ ಆಗಮಿಸಿದ್ದರು.
ಸುಮಾರು 27 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸುತ್ತಿದ್ದು ಇಂದು 40ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಪರಿಸ್ಥಿತಿ ವಿಕೋಪಕ್ಕೆ ಬರುವ ಲಕ್ಷಣಗಳು ಕಾಣುತ್ತಲೇ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಕರಣವನ್ನು ಸುಖಾಂತ್ಯಗೊಳಿಸಲು ಖುದ್ದು ಕಾಲೇಜಿಗೆ ಭೇಟಿ ನೀಡಿದ್ದರು
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹಿಜಾಬ್ ಕುರಿತಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರ ಜತೆ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದು, ಸಂಧಾನ ವಿಫಲವಾಗಿದೆ. ಹಿಜಾಬ್ ಧರಿಸುವುದು ನಮ್ಮ ಪದ್ಧತಿ ಎಂದು ಪೋಷಕರು ಪಟ್ಟು ಹಿಡಿದರು ಎನ್ನಲಾಗಿದೆ.
ಬಳಿಕ ಘಟನೆಯ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಗೆ ಕರೆ ಮಾಡಿ ಶಾಸಕ ಶ್ರೀನಿವಾಸ ಶೆಟ್ಟಿಯವರು ಮಾಹಿತಿ ನೀಡಿದರು. ಈ ವೇಳೆ ಕಾಲೇಜಿನ ಕಂಪೌಂಡ್ ಒಳಗೆ ಕೇವಲ ಸಮವಸ್ತ್ರ ಧರಿಸಲು ಅವಕಾಶವಿದ್ದು ಅದನ್ನೇ ಪಾಲಿಸುವಂತೆ ಸೂಚನೆ ನೀಡಿದ್ದು, ಸಚಿವರ ಸೂಚನೆಯನ್ನು ಸಭೆಗೆ ಶಾಸಕರು ತಿಳಿಸಿದರು.
ವಸ್ತ್ರಸಂಹಿತೆ ಹೊರತಾಗಿ ಬೇರೆ ಬಟ್ಟೆಗಳಿಗೆ ಅವಕಾಶ ಇಲ್ಲ ಎಂದು ಸಚಿವರು ಸೂಚನೆ ನೀಡಿದ್ದು, ಸಮವಸ್ತ್ರದ ಹೊರತಾಗಿ ಇತರ ವಸ್ತ್ರ ಧರಿಸಿದರೆ ಕಾಲೇಜು ಆವರಣದೊಳಗೆ ಪ್ರವೇಶ ಇಲ್ಲ. ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ನಾಳೆಯಿಂದ ಎರಡೂ ಸಮುದಾಯದ ವಿದ್ಯಾರ್ಥಿಗಳು ವಸ್ತ್ರ ಸಂಹಿತೆ ಪಾಲನೆ ಮಾಡಬೇಕು. ಇಲ್ಲವಾದಲ್ಲಿ ಕಾಲೇಜಿಗೆ ಪ್ರವೇಶವಿಲ್ಲ ಎಂದು ಕಾಲೇಜು ಮೂಲಗಳು ತಿಳಿಸಿದೆ.
ಇದೇ ವೇಳೆ ನಾವು ಸರಕಾರದ ನಿಯಮ ಪಾಲಿಸಲು ಬದ್ದರಿದ್ದು, ಒಂದುವೇಳೆ ಮುಸ್ಲಿಂ ವಿಧ್ಯಾರ್ಥಿನಿಯರು ಹಿಜಬ್ ಧರಿಸಿಕೊಂಡು ಬಂದರೆ ನಮ್ಮ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡೇ ಬರುವುದಾಗಿ ಹಿಂದು ಜಾಗರಣಾ ವೇದಿಕೆಯ ಪ್ರಮುಖರಾದ ಪ್ರಕಾಶ್ ಕುಕ್ಕೆಹಳ್ಳಿ ಎಚ್ಚರಿಕೆ ನೀಡಿದ್ದಾರೆ.