Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಕುಟುಂಬಗಳಿಂದಲೇ ಸಂಸ್ಕಾರ ಸಂವರ್ಧನೆ

ಕುಟುಂಬಗಳಿಂದಲೇ ಸಂಸ್ಕಾರ ಸಂವರ್ಧನೆ

ಕುಟುಂಬಗಳಿಂದಲೇ ಸಂಸ್ಕಾರ ಸಂವರ್ಧನೆ

ಉಡುಪಿ, ಡಿ. 23 (ಸುದ್ದಿಕಿರಣ ವರದಿ): ಚತುರ್ಥಾಶ್ರಮ ವ್ಯವಸ್ಥೆಯಲ್ಲಿ ಗೃಹಸ್ಥಾಶ್ರಮ ಶ್ರೇಷ್ಠವಾಗಿದ್ದು, ಕುಟುಂಬ ವ್ಯವಸ್ಥೆ ಈ ಆಶ್ರಮದ ಮೂಲ ತತ್ವ. ಸಂಸ್ಕಾರ ಸಂವರ್ಧನೆ ಕುಟುಂಬಗಳಿಂದ ಆಗಬೇಕು ಎಂದು ಅಖಿಲ ಭಾರತ ಕುಟುಂಬ ಪ್ರಬೋಧನ್ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.

ಇಲ್ಲಿನ ಶ್ರೀಕೃಷ್ಣ ಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಗುರುವಾರ ನಡೆದ ಅದಮಾರು ನರಹರಿತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪ್ರಿಯ ಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ ವಿಶ್ವಾರ್ಪಣಮ್ ಉತ್ಸವದ 19ನೇ ದಿನದ ಕಾರ್ಯಕ್ರಮದಲ್ಲಿ ಸಂಸ್ಕಾರ ಸಂವರ್ಧನೆಯಲ್ಲಿ ಕುಟುಂಬದ ಪಾತ್ರ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಭಾರತದ ಕೊಡುಗೆ
ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸಂಸ್ಕಾರವನ್ನು ಹಸ್ತಾಂತರಿಸುವ ಕ್ರಮ ಭಾರತ, ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆ. ಈ ವ್ಯವಸ್ಥೆಯನ್ನು ನಮ್ಮ ಹಿರಿಯರು ಮಾಡಿದ್ದಾರೆ. ಸಮಾಜ ಹಿತ ಮತ್ತು ರಾಷ್ಟ್ರಹಿತ ಕುಟುಂಬ ವ್ಯವಸ್ಥೆಯ ಆಶಯ ಎಂದರು.

ಮನೆ, ವಿದ್ಯಾಲಯ, ಮಠ ಮಂದಿರಗಳು ಹಾಗೂ ಸಮಾಜ ಸಂಸ್ಕಾರ ಮೂಡಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ಎಂದರು.

ಪಂಚ `ಭ’ಗಳಿಂದ ಉನ್ನತಿ
ಸಂಸ್ಕಾರ ಸಂವರ್ಧನೆಗೆ ಭಜನೆ, ಭೋಜನ, ಭಾಷೆ, ವೇಷ ಭೂಷಣ, ಭ್ರಮಣ (ಪ್ರವಾಸ) ಹಾಗೂ ಭವನ (ಮನೆ) ಆಲಯವಾಗಬೇಕು. ಇವೆಲ್ಲವೂ ಮನೆಗಳಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ಸಂಸ್ಕಾರದಿಂದ ಸಂಸ್ಕೃತಿ
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮನೆ, ಮಂದಿರ, ಸಮಾಜದಿಂದ ಲಭಿಸುವ ಒಂದೊಂದು ಪ್ರಭಾವವೂ ತಾತ್ಕಾಲಿಕ ಸತ್ಯವನ್ನು ವೈಭವೀಕರಿಸದೆ ಶಾಶ್ವತ ಸತ್ಯದೆಡೆಗೆ ನಮ್ಮನ್ನು ಕೊಂಡೊಯ್ಯಲು ನೆರವಾಗುತ್ತವೆ. ಸಂಸ್ಕಾರಗಳು ಮನುಷ್ಯನನ್ನು ಪಾತ್ರನನ್ನಾಗಿಸುತ್ತವೆ ಎಂದರು.

ಪರಿವರ್ತನೆಗೆ ನಾಂದಿ
ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖೆಯ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಧಾರ್ಮಿಕ ನಂಬಿಕೆಗಳು ಸಮಾಜದಲ್ಲಿ ಇಂದೂ ಅಲ್ಲಲ್ಲಿ ನೆಲೆಯೂರಿದೆ ಎಂಬುದು ನಿಜವಾದರೆ, ಅದರಲ್ಲಿ ಪ್ರಧಾನ ಪಾತ್ರ ಮಠ ಮಂದಿರಗಳದ್ದು ಎಂದರು.

ಮನಸ್ಸಿನ ಪರಿವರ್ತನೆ ದೇಶದ ಪರಿವರ್ತನೆಗೆ ನಾಂದಿಯಾಗುತ್ತದೆ. ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಮಠ ಸ್ವಾಧೀನಕ್ಕೆ ತಡೆ
ಅಭ್ಯಾಗತರಾಗಿ ಆಗಮಿಸಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರಕಾರ ಕೃಷ್ಣಮಠವನ್ನು ಸ್ವಾಧೀನಪಡಿಸಿಕೊಳ್ಳುವ ಸಿದ್ಧತೆ ನಡೆಸಿತ್ತು. ಈ ಹುನ್ನಾರ ಅರಿತ ಸಚಿವನಾಗಿದ್ದ ತಾನು ಮುಖ್ಯಮಂತ್ರಿಯನ್ನು ಸಂಪರ್ಕಿಸಿ, `ಕೃಷ್ಣ ಮಠಕ್ಕೆ ಏನಾದರೂ ತೊಂದರೆ ಉಂಟಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲ ಶಾಸನ ನಾನಾಗಿರುತ್ತೇನೆ’ ಎಂದು ಹೇಳಿ ಆ ಪ್ರಸ್ತಾವನೆಗೆ ಪೂರ್ಣವಿರಾಮ ಹಾಕುವ ಸಣ್ಣ ಕೆಲಸ ಮಾಡಿದ್ದೇನೆ. ಆ ಬಗ್ಗೆ ನನಗೆ ತೃಪ್ತಿ ಇದೆ ಎಂದರು.
ಪಲಿಮಾರು ಮಠ ಪರ್ಯಾಯ ಕಾಲದಲ್ಲಿ ಕೃಷ್ಣಮಠದ ಡ್ರೈನೇಜ್ ವ್ಯವಸ್ಥೆಯನ್ನು ನಗರಸಭೆ ಮೂಲಕ ಸರಿಪಡಿಸುವ ಅವಕಾಶ ಲಭಿಸಿತ್ತು ಎಂದರು.

ಶ್ಲಾಘನೀಯ ಕಾರ್ಯ
ಕೊರೊನಾ ಸಂದರ್ಭದಲ್ಲಿ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೃಷ್ಣ ಮಠ ಕಾರ್ಯನಿರ್ವಹಿಸಿದ ಕ್ರಮ ಶ್ಲಾಘನೀಯ. ಕೊರೊನಾ ಬಾಧೆ ಕಡಿಮೆಯಾಗಿದ್ದ ಸಂದರ್ಭ ದೇವಸ್ಥಾನಗಳನ್ನು ಭಕ್ತಾದಿಗಳ ಪ್ರವೇಶಕ್ಕೆ ಮುಕ್ತಗೊಳಿಸುವ ಸರಕಾರದ ಆದೇಶದ ಹೊರತಾಗಿಯೂ ಕೃಷ್ಣಮಠವನ್ನು ಒಂದಷ್ಟು ಕಾಲ ವಿಳಂಬವಾಗಿಸಿದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸಾರ್ವಜನಿಕರ ಆರೋಗ್ಯದ ರಕ್ಷಣೆ ಕಾಳಜಿ ಶ್ಲಾಘನೀಯ ಎಂದರು.

ಸನ್ಮಾನ
ಈ ಸಂದರ್ಭದಲ್ಲಿ ಮಂಗಳೂರು ಶಾರದಾ ವಿದ್ಯಾಯಲಯದ ಮುಖ್ಯಸ್ಥ ಹಾಗೂ ವಿ.ಹಿಂ.ಪ. ಅಧ್ಯಕ್ಷ ಎಂ. ಬಿ. ಪುರಾಣಿಕ್, ಬಳ್ಳಮಂಜ ಶ್ರೀ ಅನಂತೇಶ್ವರ ದೇವಳದ ಸೇವಕ ಪುರುಷೋತ್ತಮ ದೇವಾಡಿಗ, ಶ್ರೀ ಕೃಷ್ಣಮಠದ ಸೇವಕ ನಾರಾಯಣದಾಸ ಹಾಗೂ ಗಮಕ ಮತ್ತು ಸುಗಮ ಸಂಗೀತ ಕಲಾವಿದ ಎಚ್. ಚಂದ್ರಶೇಖರ ಕೆದ್ಲಾಯ ಅವರನ್ನು ಶ್ರೀಪಾದರು ಸನ್ಮಾನಿಸಿದರು.

ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ಮಠದ ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯಿಂದ ಚೂಡಾಮಣಿ- ಲಂಕಾದಹನ ಪ್ರಸಂಗದ ಗೊಂಬೆಯಾಟ ಪ್ರದರ್ಶನ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!