Sunday, July 3, 2022
Home ಸಮಾಚಾರ ರಾಜ್ಯ ವಾರ್ತೆ ನಾಡಪ್ರಭು ಕೆಂಪೇಗೌಡ ಜನ್ಮದಿನಾಚರಣೆ

ನಾಡಪ್ರಭು ಕೆಂಪೇಗೌಡ ಜನ್ಮದಿನಾಚರಣೆ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರ 512ನೇ ಜಯಂತಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯುಡಿಯೂರಪ್ಪ ಅವರು ಕೆಂಪೇಗೌಡರ ಅಂಚೆಚೀಟಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಅಶ್ವಥನಾರಾಯಣ್ ಭಾಗವಹಿಸಿ, ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ. ಕೆಂಪೇಗೌಡ ಅವರ ಕಂಚಿನ ಪುತ್ಥಳಿ ಮುಂದಿನ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆ ಆಗಲಿದೆ ಎಂದರು.

ಕೆಂಪಾಪುರದಲ್ಲೂ ಕೆಂಪೇಗೌಡರ ವೀರ ಸಮಾಧಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಂಪೇಗೌಡ ಜಯಂತಿಯನ್ನು ಬೆಂಗಳೂರು ಹಬ್ಬವಾಗಿ ಆಚರಣೆ ಮಾಡಬೇಕು. ಈ ರೀತಿ ಆಚರಿಸಲು ಕಳೆದ ಎರಡು ವರ್ಷದ ಹಿಂದೆಯೇ ಚಿಂತನೆ ನಡೆದಿತ್ತು. ಆದರೆ, ಕೊರೊನಾದಿಂದಾಗಿ ತಡೆಯಲಾಗಿತ್ತು. ಮುಂದಿನ ದಿನಗಳಲ್ಲಿ ಸೋಂಕು ಕಡಿಮೆಯಾದ ಆಚರಿಸಲಾಗುವುದು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಹಲವಾರು ಕೆಲಸ ಕಾರ್ಯ ಮಾಡಲಾಗುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ, ನಮ್ಮ ಮೆಟ್ರೋ ಹೆಸರನ್ನು ನಮ್ಮ ಕೆಂಪೇಗೌಡ ಮೆಟ್ರೋ ಅಥವಾ ಕೆಂಪೇಗೌಡ ಮೆಟ್ರೋ ಎಂದು ಬದಲಿಸಬೇಕು, ವಿಧಾನಸೌಧದಲ್ಲೂ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡಬೇಕು ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕ ಮಾಡುವಂತೆ ಮನವಿ ಮಾಡಿದರು.

ಡಿಸಿಎಂ ಗೋವಿಂದ ಕಾರಜೋಳ, ಸಚಿವ ಗೋಪಾಲಯ್ಯ, ಶಾಸಕರಾದ ಮುನಿರತ್ನ ಮತ್ತು ರಿಜ್ವಾನ್ ಅರ್ಷದ್, ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವ ಎಚ್. ಆರ್. ವಿಶ್ವನಾಥ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಇದ್ದರು.

ಟ್ವಿಟರ್ ಶುಭಾಶಯ ಕೋರಿದ ಸಿಎಂ ಯಡಿಯೂರಪ್ಪ
ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಟ್ವಿಟರ್ ಮೂಲಕ ಸಂದೇಶ ಕಳಿಸಿದ್ದಾರೆ. ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ ವ್ಯಾಪಾರ ವಹಿವಾಟಿಗೆ ಅನೇಕ ಪೇಟೆಗಳನ್ನು ಕಟ್ಟಿ ಅತ್ಯಂತ ಯೋಜನಾಬದ್ಧವಾಗಿ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಸಂಸ್ಮರಣೆ ಜೊತೆಗೆ ಆ ಧೀಮಂತ ಆಡಳಿತಗಾರನಿಗೆ ಅನಂತ ಪ್ರಣಾಮ ಸಲ್ಲಿಸೋಣ ಎಂದವರು ಶುಭಾಶಯ ಕೋರಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!