Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕೊಡವೂರು ಶಂಕರನಾರಾಯಣ ದೇವಸ್ಥಾನ: ಕೃತಜ್ಞತಾ ಸಭೆ, ಸ್ಮರಣ ಸಂಚಿಕೆ ಅನಾವರಣ

ಕೊಡವೂರು ಶಂಕರನಾರಾಯಣ ದೇವಸ್ಥಾನ: ಕೃತಜ್ಞತಾ ಸಭೆ, ಸ್ಮರಣ ಸಂಚಿಕೆ ಅನಾವರಣ

ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ರಾಶಿಪೂಜಾ ಮಹೋತ್ಸವ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ಪ್ರಮುಖರಿಗೆ ಕೃತಜ್ಞತೆ ಸಮರ್ಪಣೆ ಹಾಗೂ ಸ್ಮರಣ ಸಂಚಿಕೆ ಅನಾವರಣ ಕಾರ್ಯಕ್ರಮ ಈಚೆಗೆ ನಡೆಯಿತು.

ದೇವಳದ ತಂತ್ರಿ ಪೂತ್ತೂರು ಹಯವದನ ತಂತ್ರಿ ರಾಶಿಪೂಜಾ ಮಹೋತ್ಸವದ ಸ್ಮರಣಸಂಚಿಕೆ ಅನಾವರಣಗೊಳಿಸಿ, ದೇವಾಲಯದ ಪ್ರಸಕ್ತ ವ್ಯವಸ್ಥಾಪನ ಸಮಿತಿಯ 3 ವರ್ಷ ಅವಧಿಯ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡವೂರು ಶ್ರೀಶಂ ಭಕ್ತವೃಂದ ಅಧ್ಯಕ್ಷ ರವಿರಾಜ್ ಹೆಗ್ಡೆ, ನಗರಸಭಾ ಸದಸ್ಯ ವಿಜಯ ಕೊಡವೂರು, ನಗರಸಭೆ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಆಗಮಿಸಿದ್ದರು.

ರಾಶಿ ಪೂಜಾ ಮಹೋತ್ಸವ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ನಾಗರಾಜ ಸುವರ್ಣ, ಸೇವಾ ಸಮಿತಿ ಗೌರವಾಧ್ಯಕ್ಷ ಆನಂದ ಪಿ. ಸುವರ್ಣ, ದೇವಳದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಾಂತಪ್ಪ ಕರ್ಕೇರ, ರಾಶಿಪೂಜಾ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ ಸಾಲ್ಯಾನ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಭಾಸ್ಕರ ಪಾಲನ್, ಎ. ರಾಜ ಸೇರಿಗಾರ, ಕೆ. ಬಾಬ, ಸುಧಾ ಎನ್. ಶೆಟ್ಟಿ, ಬೇಬಿ ಮೆಂಡನ್ ಮೊದಲಾದವರಿದ್ದರು.

ಪ್ರಶಸ್ತಿ ಪ್ರದಾನ
ಕಳೆದ ಹಲವಾರು ವರ್ಷಗಳಿಂದ ದೇಗುಲದಲ್ಲಿ ಸೇವೆ ಸಲ್ಲಿಸಿದ ಅಡಿಗ ಕೃಷ್ಣಮೂರ್ತಿ ಭಟ್, ಅನಂತ ಪದ್ಮನಾಭ ಭಟ್, ವೆಂಕಟೇಶ ಆಚಾರ್ಯ ಮತ್ತು ಸಂಜೀವ ಅವರಿಗೆ ಶ್ರೀ ಶಂಕರ ನಾರಾಯಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವ್ಯವಸ್ಥಾಪನ ಸಮಿತಿ ಸದಸ್ಯ ಜನಾರ್ದನ ಕೊಡವೂರು ಸ್ವಾಗತಿಸಿದರು. ರಾಶಿಪೂಜಾ ಸಮಿತಿ ಕೋಶಾಧಿಕಾರಿ ಉಮೇಶ ರಾವ್ ಲೆಕ್ಕಪತ್ರ ಮಂಡಿಸಿದರು. ಪೂರ್ಣಿಮಾ ಜನಾರ್ದನ ವಂದಿಸಿದರು. ಕಾವ್ಯ ಸೀತಾರಾಮ್ ಪ್ರಾರ್ಥಿಸಿದರು. ಯೋಗೀಶ್ ಕೊಳಲಗಿರಿ ಮತ್ತು ಸತೀಶ್ ಕೊಡವೂರು ನಿರೂಪಿಸಿದರು.

ಸಂಪಾದಕಿಯ ಅಂತರಂಗದ ನಮನ
ಒಡೆಯನ ಸೇವೆಯಲ್ಲಿ ಹರುಷ ತಂದ ಮೂರು ವರುಷ….. ಶೀರ್ಷಿಕೆಯಲ್ಲಿ ಶ್ರೀದೇವಳದ ವ್ಯವಸ್ಥಾಪನಾ ಸಮಿತಿ ತಮ್ಮ ಸಾರ್ಥಕ್ಯ ಸೇವೆ ಅನಾವರಣಗೊಳಿಸಿದ್ದು, ಸ್ಮರಣ ಸಂಚಿಕೆಯ ಸಂಪಾದಕಿಯಾಗುವ ಸುಯೋಗ ಲಭಿಸಿರುವುದು ಶ್ರೀದೇವರ ಕೃಪೆ ಎಂದು ಪರಿಭಾವಿಸುವುದಾಗಿ ಸಂಚಿಕೆಯ ಸಂಪಾದಕಿ ಪೂರ್ಣಿಮಾ ಜನಾರ್ದನ್ ತನ್ನ ಒಡಲಾಳದ ಮಾತುಗಳನ್ನಾಡಿದರು.

ಸಂಚಿಕೆಯ ಪುಟ ಕಟ್ಟುವ ಕಾಯಕದಲಿ ಬಂದೊದಗಿದ ಹತ್ತು ಹಲವು ತಾಪತ್ರಯಗಳ ನಡುವೆ ನಮ್ಮೊಡೆಯನ ಅನುಗ್ರಹದಿಂದ ಸುಸೂತ್ರವಾಗಿ ಮುದ್ರಣಗೊಂಡು ನೋಡಲು, ಓದಲು ಅತ್ಯಾಕರ್ಷಕವಾಗಿ ಮೂಡಿಬಂದಿರುವುದು ಶ್ರೀ ಶಂಕರನಾರಾಯಣನ ಅನುಗ್ರಹದಿಂದ ಎಂಥಾ ಕಷ್ಟಗಳೂ ಕರಗಿ, ಇಷ್ಟಗಳಾಗಿ ಪರಿವರ್ತನೆ ಹೊಂದುತ್ತದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂದವರು ದೇವನೊಲುಮೆಯ ಬಗೆಯನ್ನು ವಿವರಿಸಿದರು.

ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯ ಪ್ರಕಾಶ್ ಕೊಡವೂರು, ಜನಾರ್ದನ ಕೊಡವೂರು ಸೇರಿದಂತೆ ಸಮಿತಿಯ ಸರ್ವ ಸದಸ್ಯರಿಗೆ ನಲ್ಮೆಯ ನಮನ ಸಲ್ಲಿಸುವುದರೊಂದಿಗೆ, ಸಹಕರಿಸಿದ ಸುಪ್ರಿಯಾ ಅವರಿಗೂ ಕೃತಜ್ಞತೆ ಸಲ್ಲಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!