Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣ ತನಿಖೆ ಸಿಓಡಿಗೆ: ಗೃಹ ಸಚಿವ ಆರಗ

ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣ ತನಿಖೆ ಸಿಓಡಿಗೆ: ಗೃಹ ಸಚಿವ ಆರಗ

ಸುದ್ದಿಕಿರಣ ವರದಿ
ಶನಿವಾರ, ಜನವರಿ 1, 2022

ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣ ತನಿಖೆ ಸಿಓಡಿಗೆ: ಗೃಹ ಸಚಿವ ಆರಗ

ಬ್ರಹ್ಮಾವರ: ಈಚೆಗೆ ಕೋಟತಟ್ಟು ಕೊರಗರ ಕಾಲನಿಯಲ್ಲಿ ಕೊರಗರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣವನ್ನು ಸಿ.ಓ.ಡಿ. ತನಿಖೆಗೊಪ್ಪಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಶನಿವಾರ ಇಲ್ಲಿಗೆ ಸಮೀಪದ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗರ ಕಾಲನಿಗೆ ಭೇಟಿ ನೀಡಿದ ಅವರು, ಈಗಾಗಲೇ ಪ್ರಕರಣ ಸಂಬಂಧ ಕೋಟ ಪಿಎಸ್.ಐ. ಅಮಾನತುಗೊಂಡಿದ್ದು, ಐವರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಕೊರಗರ ಮೇಲಿನ ದೌರ್ಜನ್ಯ ಹಾಗೂ ಅವರ ವಿರುದ್ಧ ದಾಖಲಾಗಿರುವ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹಲ್ಲೆ ನಡೆಸಿದ ಪ್ರಕರಣವನ್ನು ಸಿಒಡಿ ತನಿಖೆಗೊಳಪಡಿಸಲಾಗುವುದು. ಸತ್ಯಾಸತ್ಯತೆ ಹೊರಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪೊಲೀಸರಿಂದ ಸುಳ್ಳು ಪ್ರಕರಣ!
ಕೊರಗರ ಮೇಲೆ ಹಲ್ಲೆ ನಡೆದು 2-3 ದಿನಗಳ ಬಳಿಕ ಕಾನ್ ಸ್ಟೇಬಲ್ ಒಬ್ಬರು ಆಸ್ಪತ್ರೆಗೆ ದಾಖಲಾಗಿ, ಕೊರಗರ ವಿರುದ್ಧ ಸರಕಾರಿ ನೌಕರಿಗೆ ಅಡ್ಡಿ ಹಾಗೂ ಹಲ್ಲೆ ಪ್ರಕರಣ ದಾಖಲಿಸಿರುವುದು ಮೇಲ್ನೋಟಕ್ಕೆ ಸುಳ್ಳು ಎಂದು ತಿಳಿಯುತ್ತದೆ.

ಸಾಮಾನ್ಯರು ಸುಳ್ಳು ಕೇಸ್ ದಾಖಲಿಸುವುದು ಸಾಮಾನ್ಯ. ಆದರೆ, ರಕ್ಷಣೆ ನೀಡಬೇಕಾದ ಕಾನ್ ಸ್ಟೇಬಲ್ ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಗೃಹ ಸಚಿವ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಇಲಾಖೆಗೆ ಕೆಟ್ಟ ಹೆಸರು ತರುವ ಯತ್ನ
ಕೊರಗರ ಮೇಲೆ ಹಲ್ಲೆ ನಡೆದ ದಿನವೇ ಸಂಬಂಧಪಟ್ಟ ಠಾಣೆಯ ಪಿಎಸ್ಐ ತನ್ನ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಮಾಹಿತಿ ನೀಡದೆ ಪಿಎಸ್ಐ ದಾಷ್ಟ್ಯತನ ಪ್ರದರ್ಶಿಸಿದ್ದಾರೆ.

ಪೊಲೀಸರು ಮನುಷ್ಯತ್ವ ಕಳೆದುಕೊಂಡು ಕೊರಗರ ಮೇಲೆ ಹಲ್ಲೆ ನಡೆಸಿ ಇಲಾಖೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವರು ನೊಂದು ನುಡಿದರು.

ಪರಿಹಾರಧನ ವಿತರಣೆ
ಪ್ರಕರಣದಿಂದ ಕೊರಗರು ಹೆದರಬೇಕಿಲ್ಲ. ಸರಕಾರ ನಿಮ್ಮ ಜೊತೆಗಿದೆ ಎಂದು ಅಭಯ ನೀಡಿದ ಗೃಹ ಸಚಿವ ಆರಗ, ಪೊಲೀಸ್ ದೌರ್ಜನ್ಯಕ್ಕೊಳಗಾದ 6 ಮಂದಿಗೆ ಸರಕಾರ ತಲಾ 2 ಲಕ್ಷ ಪರಿಹಾರ ನೀಡಲಿದೆ. ಮೊದಲ ಹಂತದಲ್ಲಿ ತಲಾ 50 ಸಾವಿರ ರೂ. ಹಣವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಂದೇ ವಿತರಿಸಲಾಗುತ್ತಿದೆ ಎಂದರು.

ಸರಕಾರದ ಪರಿಹಾರಧನ ಕೊರಗರ ಮನಸ್ಸಿಗೆ ಆಗಿರುವ ನೋವನ್ನು ಕಡಿಮೆ ಮಾಡುವುದಿಲ್ಲ ಎಂಬ ಅರಿವಿದೆ. ಆದರೆ, ಸರಕಾರ ಕೊರಗರ ಜೊತೆಗಿದೆ ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ಪರಿಹಾರ ನೀಡಲಾಗುತ್ತಿದೆ.

ಪೊಲೀಸರು ದಾಖಲಿಸಿರುವ ಪ್ರಕರಣದ ಬಗ್ಗೆ ಭಯಪಡಬೇಕಿಲ್ಲ. ಕೊರಗರಿಗೆ ಯಾವುದೇ ತೊಂದರೆ ಎದುರಾಗದಂತೆ ಸರಕಾರ ನೋಡಿಕೊಳ್ಳಲಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!