Saturday, August 13, 2022
Home ಸಮಾಚಾರ ಅಪರಾಧ ಕೊಲೆಗೆ 'ಕುರುಪ್' ಸಿನೆಮಾ ಪ್ರೇರಣೆ!

ಕೊಲೆಗೆ ‘ಕುರುಪ್’ ಸಿನೆಮಾ ಪ್ರೇರಣೆ!

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 15

ಕೊಲೆಗೆ ಕುರುಪ್ ಸಿನೆಮಾ ಪ್ರೇರಣೆ!
ಬೈಂದೂರು: ಇಲ್ಲಿನ ಹೇನಬೇರು ಸಮೀಪದ ನಿರ್ಜನ ಪ್ರದೇಶದಲ್ಲಿ ಆನಂದ ದೇವಾಡಿಗ ಎಂಬವರನ್ನು ಕಾರಿನಲ್ಲಿ ಸಜೀವವಾಗಿ ದಹಿಸಿ, ಕೊಲೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕುತೂಹಲಕಾರಿ ಸಂಗತಿಗಳನ್ನು ಬಯಲಿಗೆಳೆದಿದ್ದಾರೆ.

ಕೊಲೆಗೆ ಸಿನಿಮಾ ಪ್ರೇರಣೆ!

ಬಂಧಿತ ಆರೋಪಿ ಸದಾನಂದ ಶೇರಿಗಾರ್‌, ಮಲೆಯಾಳಂನ ಕುರುಪ್ ಸಿನಿಮಾದ ಅಪರಾಧ ಕೃತ್ಯಗಳಿಂದ ಪ್ರೇರಣೆಗೊಂಡು ಆನಂದ ದೇವಾಡಿಗ ಕೊಲೆಗೆ ಸಂಚು ರೂಪಿಸಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಗೊತ್ತಾಗಿದೆ.

ಕುರುಪ್ ಸಿನಿಮಾದಲ್ಲಿ ಪಾತ್ರಧಾರಿಯೊಬ್ಬ ವಿಮೆಯ ಹಣ ಪಡೆಯಲು ತನ್ನನ್ನೇ ಹೋಲುವ ವ್ಯಕ್ತಿಯನ್ನು ಹುಡುಕಿ, ಕಾರಿನಲ್ಲಿ ಸುಟ್ಟು ಹಾಕಿ ತಾನೇ ಮೃತಪಟ್ಟಿರುವುದಾಗಿ ನಂಬಿಸಿ ವಿಮೆ ಹಣ ಪಡೆದುಕೊಂಡಿರುತ್ತಾನೆ.
ಅದೇ ಮಾದರಿಯಲ್ಲಿ ಸದಾನಂದ ಶೇರಿಗಾರ್ ಕೂಡಾ ತನ್ನ ವಯಸ್ಸಿನ ವ್ಯಕ್ತಿಯನ್ನು ಹುಡುಕಿ ಕಾರಿನಲ್ಲಿ ಸುಟ್ಟುಹಾಕಿ ತಾನೇ ಮೃತಪಟ್ಟಿರುವುದಾಗಿ ನಂಬಿಸಲು ಯತ್ನಿಸಿದ್ದ.

ಕುರುಪ್ ಸಿನಿಮಾದಲ್ಲಿ ವಿಮೆ ಹಣ ಪಡೆಯಲು ಕೊಲೆ ನಡೆದಿದ್ದರೆ, ಸದಾನಂದ ಶೇರಿಗಾರ್‌ 2019ರಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ಬಂಧನಕ್ಕೊಳಗಾಗುವ ಭೀತಿಯಲ್ಲಿದ್ದ ಸದಾನಂದ ಶೇರಿಗಾರ್‌ ತನ್ನ ಸಹೋದರ, ಬಾಮೈದುನರು ಹಾಗೂ ಆಪ್ತೆ ಶಿಲ್ಪಾ ಬಳಿ ದುಃಖ ತೋಡಿಕೊಂಡಿದ್ದ. ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲು ನೆರವು ನೀಡುವಂತೆ ಅಂಗಲಾಚಿದ್ದ. ಕುರುಪ್ ಸಿನಿಮಾದಲ್ಲಿ ಬರುವ ಅಪರಾಧ ದೃಶ್ಯದಂತೆ ತನ್ನನ್ನು ಹೋಲುವ ಹಾಗೂ ಸಮಾನ ವಯಸ್ಸಿನ ವ್ಯಕ್ತಿಯನ್ನು ಹುಡುಕುವಂತೆ ನೆರವು ಕೇಳಿದ್ದ.

ಅದರಂತೆ, ಶಿಲ್ಪಾಗೆ ಪರಿಚಿತನಾಗಿದ್ದ ಕಾರ್ಕಳದಲ್ಲಿ ಗಾರೆ ಮೇಸ್ತ್ರಿಯಾಗಿದ್ದ ಆನಂದ ದೇವಾಡಿಗ ಎಂಬಾತನನ್ನು ಕೊಲೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು.

ಜುಲೈ 12ರಂದು ಆನಂದ ದೇವಾಡಿಗರನ್ನು ಮನೆಗೆ ಕರೆಸಿಕೊಂಡು ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕಂಠಪೂರ್ತಿ ಕುಡಿಸಿ, ನಿದ್ರೆಗೆ ಜಾರಿದ ಬಳಿಕ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಹೇನಬೇರು ಸಮೀಪದ ನಿರ್ಜನ ಪ್ರದೇಶಕ್ಕೆ ಕರೆತರಲಾಗಿತ್ತು. ಮಧ್ಯರಾತ್ರಿಯಲ್ಲಿ ಕಾರಿನೊಳಗೆ ಪೆಟ್ರೋಲ್ ಸುರಿದು ಆನಂದ ದೇವಾಡಿಗ ಅವರನ್ನು ಸುಟ್ಟು ಹಾಕಲಾಗಿತ್ತು.

ಪರಾರಿಯಾಗಲು ಯತ್ನ
ಕೊಲೆ ಕೃತ್ಯದ ಬಳಿಕ ಸದಾನಂದ ಶೇರಿಗಾರ್ ಶಿಲ್ಪಾ ಜೊತೆ ಬೆಂಗಳೂರು ಬಸ್‌ ಹತ್ತಿದ್ದ. ಮಾರ್ಗ ಮಧ್ಯೆ ಮನಸ್ಸು ಬದಲಾಯಿಸಿ ಹಾಸನ ಬಸ್‌ ನಿಲ್ದಾಣದಲ್ಲಿಯೇ ಇಳಿದು, ಮೂಡುಬಿದರೆ ಬಸ್‌ ಹತ್ತಿದ್ದ. ಮೂಡುಬಿದರೆಯಿಂದ ಕಾರ್ಕಳಕ್ಕೆ ಬಂದು ಇಳಿಯುತ್ತಿದ್ದಂತೆ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ಪ್ರಕರಣ ಬಿಚ್ಚಿಟ್ಟರು.

ಸಿಕ್ಕಿಬಿದ್ದ ಬಗೆ
ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆರ್‌ಎಫ್‌ಎಸ್‌ಎಲ್ ತಜ್ಞರ ಸಹಾಯದಿಂದ ಸುಟ್ಟು ಕರಕಲಾಗಿದ್ದ ಕಾರಿನ ನಂಬರ್ ಹಾಗೂ ಚೇಸಿ ನಂಬರ್‌ ಕಲೆಹಾಕಿ, ಕಾರಿನ ಮಾಲೀಕನ ವಿಳಾಸ ಪತ್ತೆ ಮಾಡಿದ್ದರು. ತಜ್ಞರು ನೀಡಿದ ನೋಂದಣಿ ಸಂಖ್ಯೆಯ ಕಾರು ಜಿಲ್ಲೆಯ 2 ಟೋಲ್‌ಗಳನ್ನು ದಾಟಿಕೊಂಡು ಹೋಗಿದ್ದು ಸ್ಪಷ್ಟವಾಗಿತ್ತು. ಕಾರಿನಲ್ಲಿದ್ದ ಮಹಿಳೆ ಟೋಲ್‌ನಲ್ಲಿ ಶುಲ್ಕ ಕಟ್ಟಿದ್ದ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಲಭಿಸಿತ್ತು.

ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್‌ ನೇತೃತ್ವದಲ್ಲಿ ಗಂಗೊಳ್ಳಿ ಪಿಎಸ್‌ಐ ವಿನಯ್‌ ಹಾಗೂ ಬೈಂದೂರು ಪಿಎಸ್‌ಐ ಪವನ್ ಅವರನ್ನೊಳಗೊಂಡ ತಂಡ ರಚಿಸಿ ತನಿಖೆ ಚುರುಕುಗೊಳಿಸಲಾಗಿತ್ತು. ತನಿಖೆಯ ಜಾಡು ಹಿಡಿದು ಹೊರಟ ತಂಡಕ್ಕೆ ಜುಲೈ 13ರಂದು ಸದಾನಂದ ಶೇರಿಗಾರ್‌ ಸಹೋದರನಿಗೆ ಕರೆ ಮಾಡಿ ನಾಪತ್ತೆ ದೂರು ನೀಡುವಂತೆ ತಿಳಿಸಿದ ಮಾಹಿತಿ ಲಭ್ಯವಾಗಿತ್ತು.

ಈ ಮಾಹಿತಿ ಪ್ರಕರಣಕ್ಕೆ ತಿರುವು ನೀಡಿ ಆರೋಪಿಗಳನ್ನು ಬಂಧಿಸಲು ನೆರವಾಯಿತು ಎಂದು ಪೊಲೀಸರು ತಿಳಿಸಿದರು.

ಬಟ್ಟೆ ಬದಲಿಸಿದ್ದ ಆರೋಪಿಗಳು
ಪ್ರಕರಣದಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಆರೋಪಿಗಳು ಕೊಲೆಗೂ ಮುನ್ನ ಆನಂದ ದೇವಾಡಿಗರಿಗೆ ಆರೋಪಿ ಸದಾನಂದ ಶೇರಿಗಾರ್ ಬಟ್ಟೆ ಹಾಕಿದ್ದರು!

ಮದ್ಯದ ಅಮಲಿನಲ್ಲಿದ್ದ ಆನಂದ ದೇವಾಡಿಗರನ್ನು ಕಾರಿನ ಹಿಂಬದಿಯ ಸೀಟಿನಲ್ಲಿ ಕುಳ್ಳಿರಿಸಿ 7 ಲೀಟರ್‌ ಪೆಟ್ರೋಲ್ ಸುರಿದು ಬೆಂಕಿ ಹೆಚ್ಚಿದ್ದರು. ಕಾರು ಸಂಪೂರ್ಣವಾಗಿ ಸುಟ್ಟುಹೋದ ಬಳಿಕ ಆರೋಪಿಗಳು ಸ್ಥಳದಿಂದ ತೆರಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

50 ಸಾವಿರ ಬಹುಮಾನ
ಆನಂದ ದೇವಾಡಿಗ ಕೊಲೆ ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿರುವ ಬೈಂದೂರು ಪೊಲೀಸರ ತಂಡಕ್ಕೆ ಐಜಿಪಿ ದೇವಜ್ಯೋತಿ ರೇ 50 ಸಾವಿರ ಬಹುಮಾನ ಘೋಷಿಸಿದ್ದಾರೆ. ಸಿಬ್ಬಂದಿ ಕಾರ್ಯ ದಕ್ಷತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!