ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಲು ಒತ್ತಾಯ
ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರಿಡಬೇಕು ಎಂದು ಮೂಲ್ಕಿ- ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ವಿಧಾನಸಭೆಯಲ್ಲಿ ಮಂಗಳವಾರ ಒತ್ತಾಯಿಸಿದ್ದಾರೆ.
ಈ ನಾಡಿನಲ್ಲಿ ಜನ್ಮ ತಳೆದು ತಮ್ಮ ಬದುಕು ಮತ್ತು ಸಾಧನೆಯಿಂದ ವೀರ ಪುರುಷರಾದವರು, ದೈವಿಕ ಶಕ್ತಿ ಗಳಿಸಿಕೊಂಡವರು ಅನೇಕರಿದ್ದಾರೆ. ಅವರಲ್ಲಿ ವೀರ ಪುರುಷರು ಎನಿಸಿಕೊಂಡು ತಮ್ಮ ಜನಸೇವೆ, ವೀರಗಾಥೆ, ಅಸಾಮಾನ್ಯ ನಡೆನುಡಿಗಳಿಂದ ದೈವತ್ವಕ್ಕೆ ಏರಿ ಅಮರರಾದವರಲ್ಲಿ ಕೋಟಿ ಚೆನ್ನಯರ ಹೆಸರು ಎಲ್ಲರಿಗೂ ತಿಳಿದಿದೆ. ವೀರ ಪುರುಷರಾದ ಕೋಟಿ ಚೆನ್ನಯರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕು. ವೀರ ಪುರುಷ ಕೋಟಿ ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಎಂದು ನಾಮಕರಣ ಮಾಡಬೇಕು ಎಂದವರು ಒತ್ತಾಯಿಸಿದರು.
ಈ ಸಂಬಂಧ ರಾಜ್ಯ ಸರಕಾರ ಮುತುವರ್ಜಿ ವಹಿಸಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು. ಈಗಾಗಲೇ ಮಂಗಳೂರಿನಲ್ಲಿ ಕೋಟಿ ಚೆನ್ನಯರ ಹೆಸರು ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಪ್ರತಿಭಟನೆ, ರ್ಯಾಲಿಗಳನ್ನು ನಡೆಸಲಾಗುತ್ತಿದೆ. ಸರಕಾರ ಕೂಡಲೇ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ವೀರ ಪುರುಷ ಕೋಟಿ ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಎಂದು ಹೆಸರು ಇಡಬೇಕು ಎಂದು ಕೋಟ್ಯಾನ್ ಸರಕಾರವನ್ನು ಆಗ್ರಹಿಸಿದರು.