Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಕೋವಿಡ್ ಪರಿಸ್ಥಿತಿಗೆ ಬದುಕು ಹೊಂದಿಸಿಕೊಳ್ಳಲು ಸಲಹೆ

ಕೋವಿಡ್ ಪರಿಸ್ಥಿತಿಗೆ ಬದುಕು ಹೊಂದಿಸಿಕೊಳ್ಳಲು ಸಲಹೆ

ಮಣಿಪಾಲ: ಕೋವಿಡ್ 19 ಸೋಂಕಿನ ಕರಾಳ ಛಾಯೆ ಜಗತ್ತನ್ನೇ ಆವರಿಸಿ ಜನಜೀವನ ಅಸ್ತವ್ಯಸ್ಥಗೊಳಿಸಿದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಕ್ಷಮ ನೇತೃತ್ವದಿಂದ ಈ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಪ್ರಯತ್ನ ಮಾಡಲಾಗಿದೆ. ಆ ಪ್ರಯತ್ನಗಳು ಇಂದು ಫಲಕಾರಿಯಾಗುತ್ತಿದ್ದು ಜನ ಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಆದರೆ, ಸರಕಾರ ಸೂಚಿಸಿದ ನಿಯಮಾವಳಿಗಳನ್ನು ಅಷ್ಟೇ ಬದ್ಧತೆಯಿಂದ ಪಾಲಿಸಿ ಸರಕಾರದ ಪ್ರಯತ್ನಗಳಿಗೆ ಸಹಕರಿಸುವುದು ಜನಸಾಮಾನ್ಯರ ಕರ್ತವ್ಯ ಎಂದು ಉಡುಪಿ ನಗರಸಭಾಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಹೇಳಿದರು.
ಇಲ್ಲಿನ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ ರಾಷ್ಟ್ರೀಯ ನಗರ ಅರೋಗ್ಯ ಅಭಿಯಾನ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಉಡುಪಿ ರಾಯಲ್, ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಮಣಿಪಾಲ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸಿಬ್ಬಂದಿಗಳಿಗೆ ಆಯೋಜಿಸಲಾದ ಮೂರು ದಿನಗಳ ಉಚಿತ ಕೋವಿಡ್ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಾಲಾ ಕಾಲೇಜುಗಳು ಆರಂಭವಾಗುವ ಮೊದಲು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸರಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಉಡುಪಿ ನಗರಸಭೆ ತನ್ನ ವ್ಯಾಪ್ತಿಯಲ್ಲಿ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸುತ್ತಿದೆ ಎಂದವರು ಹೇಳಿದರು.
ಕಾಲೇಜಿನ ಶೈಕ್ಷಣಿಕ ಸಂಯೋಜಕ ಟಿ. ರಂಗ ಪೈ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡೆರಿಕ್ ಮಸ್ಕರೇಞಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಕಾರಿ ಭಾರತೀ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ರಾಯಲ್ ಸ್ಥಾಪಕಾಧ್ಯಕ್ಷ ರತ್ನಾಕರ ಇಂದ್ರಾಳಿ, ಸ್ನೇಹ ಸಂಗಮ ಈಶ್ವರನಗರ ಅಧ್ಯಕ್ಷ ಹರೀಶ್ ಜಿ. ಕಲ್ಮಾಡಿ, ಕಾರ್ಯಕ್ರಮದ ಯೋಜನಾ ನಿರ್ದೇಶಕ ಸತೀಶ್ ಎನ್., ಪ್ರಾಧ್ಯಾಪಕ ಸುರೇಶ ನಾಯಕ್, ಆಶಾ ಕಾರ್ಯಕರ್ತೆ ರಮಾದೇವಿ, ವಾರ್ಡ್ ಸಮಿತಿ ಅಧ್ಯಕ್ಷ ಗಿರೀಶ್, ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನೀಷಿಯನ್ ಸೌಮ್ಯ, ರೋಟರಿ ಸದಸ್ಯೆ ಲಕ್ಷ್ಮೀ ಪಿ. ಶೆಟ್ಟಿ ಕಿನ್ನಿಮೂಲ್ಕಿ ಇದ್ದರು.
ಕಾರ್ಯಕ್ರಮ ಸಂಘಟಕ, ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಅಶ್ವಿನ್ ನಿರೂಪಿಸಿ, ಅಮೃತಾ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!