Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಸಾಂಕ್ರಾಮಿಕ ರೋಗ ರಕ್ಷಣೆಗೆ ಮುಂಜಾಗ್ರತಾ ಕ್ರಮ ಪಾಲಿಸಲು ಸೂಚನೆ

ಸಾಂಕ್ರಾಮಿಕ ರೋಗ ರಕ್ಷಣೆಗೆ ಮುಂಜಾಗ್ರತಾ ಕ್ರಮ ಪಾಲಿಸಲು ಸೂಚನೆ

ಉಡುಪಿ: ಜಿಲ್ಲೆಯಲ್ಲಿ ಈಗಾಗಲೇ ಅಕಾಲಿಕ ಮಳೆ ಸುರಿಯುತ್ತಿದ್ದು, ಭಾಗಶಃ ಮಳೆಗಾಲ ಚುರುಕುಗೊಂಡಿರುವುದರಿಂದ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ ಮತ್ತು ಮೆದುಳು ಜ್ವರ ಪ್ರಕರಣ ಹೆಚ್ಚಾಗಿ ಕಂಡುಬರುತ್ತವೆ.

ಜನ ಜಾಗೃತರಾಗಿ ಎಲ್ಲಾ ಸಾಂಕ್ರಾಮಿಕ ರೋಗಗಳಿಂದ ಸುರಕ್ಷಿತರಾಗಿರಲು ಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಮೇ 16ನ್ನು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಡೆಂಗ್ಯೂ ಪ್ರಕರಣ ಕನಿಷ್ಟ ಮಟ್ಟಕ್ಕಿಳಿಸುವ ಗುರಿ ಹೊಂದಲಾಗಿದೆ. ಸಾಂಕ್ರಾಮಿಕ ರೋಗಗಳ ತಡೆಗೆ ವಿಶೇಷ ಒತ್ತು ನೀಡಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕೀಟಜನ್ಯ ರೋಗಗಳ ಶೀಘ್ರ ಪತ್ತೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಅನುಕೂಲವಾಗುವಂತೆ ವಿಶೇಷ ನಿಯಂತ್ರಣ ತಂಡ ರಚಿಸಿ ಕಾರ್ಯಚಟುವಟಿಕೆ ನಡೆಸಲಾಗುತ್ತಿದೆ.

ನಿಯಂತ್ರಣಾ ಕ್ರಮವಾಗಿ ಜ್ವರ ಸಮೀಕ್ಷೆ, ಸೊಳ್ಳೆ ಉತ್ಪತ್ತಿ ತಾಣಗಳ ನಾಶ, ಹೊರಾಂಗಣ/ ಒಳಾಂಗಣ ಧೂಮೀಕರಣ ನಡೆಸಲಾಗುತ್ತಿದೆ.

ಹಿಂದಿನ ವರ್ಷಗಳಲ್ಲಿ ಹೆಚ್ಚು ಪ್ರಕರಣ ಕಂಡುಬಂದ ಪ್ರದೇಶಗಳು, ವಲಸೆ ಕಾರ್ಮಿಕರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.. ಅಗತ್ಯ ಔಷಧ, ರಾಸಾಯನಿಕ ಹಾಗೂ ಉಪಕರಣಗಳು ಸಾಕಷ್ಟು ಸಂಖ್ಯೆಯಲ್ಲಿವೆ ಎಂದು ಡಿಸಿ ಜಗದೀಶ ತಿಳಿಸಿದರು.

ಜಿಲ್ಲೆಯಲ್ಲಿ ಕೀಟಜನ್ಯ ರೋಗಗಳು ಹತೋಟಿಯಲ್ಲಿದ್ದು, ಜನರು ಆತಂಕಪಡುವ ಕಾರಣವಿಲ್ಲ. ಆದರೂ ಸಾಮಾನ್ಯ ಜ್ವರ ಅಥವಾ ಇನ್ನಿತರ ಸಾಂಕ್ರಾಮಿಕ ರೋಗ ಲಕ್ಷಣ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೇ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸಾರ್ವಜನಿಕರು ಮನೆಯ ಸುತ್ತಮುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಬಯಲಿನಲ್ಲಿ ತ್ಯಾಜ್ಯ ವಸ್ತುಗಳಾದ ಟಯರ್, ಎಳನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಗರ್ಭಿಣಿಯರು ಮತ್ತು ಮಕ್ಕಳು ಕೀಟನಾಶಕ ಲೇಪಿತ ಸೊಳ್ಳೆ ಪರದೆ ಬಳಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!