Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಕ್ರೀಡೆಯಿಂದ ಸೌಹಾರ್ದ ಮನೋಭಾವ ವೃದ್ಧಿ

ಕ್ರೀಡೆಯಿಂದ ಸೌಹಾರ್ದ ಮನೋಭಾವ ವೃದ್ಧಿ

ಕ್ರೀಡೆಯಿಂದ ಸೌಹಾರ್ದ ಮನೋಭಾವ ವೃದ್ಧಿ

ಉಡುಪಿ, ನ. 24 (ಸುದ್ದಿಕಿರಣ ವರದಿ): ಪ್ರತಿಯೊಬ್ಬರೂ ದೈಹಿಕವಾಗಿ ಸದೃಢರಾಗಲು ಕ್ರೀಡೆ ಅತೀ ಅವಶ್ಯಕ. ಕ್ರೀಡೆಯಿಂದ ಆರೋಗ್ಯ ವೃದ್ಧಿಗೊಳ್ಳುವುದಲ್ಲದೆ ಮಾನಸಿಕವಾಗಿ ಶಕ್ತರಾಗುತ್ತೇವೆ. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಸೌಹಾರ್ದ ಮನೋಭಾವ ಬೆಳೆಯಲು ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಉಡುಪಿ- ಕರಾವಳಿ ಅಧ್ಯಕ್ಷ ಡಾ. ವಿನಾಯಕ ಶೆಣೈ ಹೇಳಿದರು.

 

ಬುಧವಾರ ಜಿಲ್ಲಾ ಗೃಹ ರಕ್ಷಕ ದಳ ಕಚೇರಿಯಲ್ಲಿ ಗೃಹರಕ್ಷಕ ದಳ ವತಿಯಿಂದ ನಡೆದ ಜಿಲ್ಲಾ ಮಟ್ಟದ ವೃತ್ತಿಪರ ಮತ್ತು ಕ್ರೀಡಾಕೂಟ ಸಮಾರೋಪ ಸಮಾರಂಭದ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.

ಗೃಹರಕ್ಷಕರು ದೇಶ ಸೇವೆ ಮತ್ತು ಸಮಾಜ ಸೇವೆಯಲ್ಲಿ ತಲ್ಲೀನರಾದಂತೆ ಕ್ರೀಡಾ ಕ್ಷೇತ್ರದಲ್ಲೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಕೊಂಡು ಮುಂದೆ ಜಿಲ್ಲೆ, ರಾಜ್ಯ, ದೇಶವನ್ನು ಪ್ರತಿನಿಧಿಸುವಂತಾಗಬೇಕು ಎಂದವರು ಆಶಿಸಿದರು.

ದೇಶ ರಕ್ಷಣೆ ಮಾಡುವ ಸೇನೆ, ಆಂತರಿಕ ಭದ್ರತೆ ಕಾಪಾಡುವ ಸಿ.ಆರ್.ಪಿ.ಎಫ್ ಹಾಗೂ ಸಮಾಜದ ರಕ್ಷಣೆ ಮಾಡುವ ಆರಕ್ಷಕ ದಳಕ್ಕೆ ಸರಿಸಾಟಿಯಾಗಿ ದೇಶದೆಲ್ಲೆಡೆ ಅಗತ್ಯಕ್ಕನುಗುಣವಾಗಿ ಚುನಾವಣೆ, ಅವಘಡಗಳು ಸಂಭವಿಸಿದಾಗ, ಸರ್ಕಾರದಿಂದ ಕರೆ ಬಂದಾಗ, ಯಾವುದನ್ನೂ ಲೆಕ್ಕಿಸದೆ ದೇಶ ಹಾಗೂ ಸಮಾಜ ಸೇವೆಯಲ್ಲಿ ಕರ್ತವ್ಯವನ್ನು ಪರಿಪೂರ್ಣವಾಗಿ ನಿರ್ವಹಿಸುವ ಗೃಹರಕ್ಷಕರ ಸೇವೆ ಅತ್ಯಂತ ಶ್ಲಾಘನೀಯ. ಅವರಿಗೆ ಸರ್ಕಾರದಿಂದ ಹೆಚ್ಚಿನ ಸವಲತ್ತು, ಪ್ರೋತ್ಸಾಹ ದೊರೆಯಬೇಕು ಎಂದರು.

ಸಮಾಜದಲ್ಲಿ ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಿದಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದ ಅವರು, ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ತಮ್ಮ ಜೀವವನ್ನು ರಕ್ಷಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕ ದಳ ಜಿಲ್ಲಾ ಕಮಾಂಡೆಂಟ್ ಡಾ. ಕೆ. ಪ್ರಶಾಂತ ಶೆಟ್ಟಿ, ಸಮಾಜದ ಏಳಿಗೆಗಾಗಿ ಯಾವುದೇ ಪ್ರತಿಫಲ ಬಯಸದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಗೃಹರಕ್ಷಕ ದಳವನ್ನು ಅಭಿನಂದಿಸಿದರು.

ನೆರೆಹೊರೆ, ಪ್ರವಾಹ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ದಿನದ 24 ಗಂಟೆಯೂ ಕಾರ್ಯಪ್ರವೃತ್ತರಾಗುವ ಗೃಹರಕ್ಷಕ ದಳದವರ ಕೆಲಸ ಶಿಸ್ತುಬದ್ಧತೆಯನ್ನು ಎತ್ತಿತೋರಿಸುತ್ತದೆ ಎಂದರು.

ಅಂತರಾಷ್ಟ್ರೀಯ ಕ್ರೀಡಾಪಟು ಶಾಲಿನಿ ಶೆಟ್ಟಿ, ಕಚೇರಿ ಅಧೀಕ್ಷಕಿ ಕವಿತಾ, ಕಾರ್ಕಳ ಘಟಕದ ಪ್ಲಟೂನ್ ಕಮಾಂಡರ್ ಪ್ರಭಾಕರ ಸುವರ್ಣ ಮತ್ತು ಗೃಹರಕ್ಷಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿ, ಬ್ರಹ್ಮಾವರ ಘಟಕದ ಪ್ಲಟೂನ್ ಕಮಾಂಡರ್ ಸ್ಟೀವನ್ ಪ್ರಕಾಶ್ ನಿರೂಪಿಸಿದರು. ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡೆಂಟ್ ಕೆ. ಸಿ ರಾಜೇಶ್ ವಂದಿಸಿದರು.

ಕ್ರೀಡಾಕೂಟದಲ್ಲಿ ವಿಜೇತರಾದ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಬಹುಮಾನ ವಿತರಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!