ಉಡುಪಿ: ಕ್ರೈಸ್ತ ಸಮುದಾಯದವರ ಅಭಿವೃದ್ಧಿಗಾಗಿ 2019- 2020ನೇ ಸಾಲಿನ ಬಜೆಟ್ ನಲ್ಲಿ ನಮೂದುಗೊಂಡ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮ, ಆರಂಭಗೊಳ್ಳುವ ಮೊದಲೇ ಅದನ್ನು ರದ್ದುಪಡಿಸುವ ಪ್ರಸ್ತಾಪ ಸರಕಾರದ ಮುಂದಿದ್ದು, ಅದರಿಂದಾಗಿ ರಾಜ್ಯದ ಕ್ರೈಸ್ತ ಸಮುದಾಯದ ಕನಸು ಭಗ್ನವಾಗಿದೆ ಎಂದು ಕ್ರೈಸ್ತ ಸಮುದಾಯ ಆತಂಕ ವ್ಯಕ್ತಪಡಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಶಾಂತ ಜತ್ತನ್ನ, ರಾಜ್ಯ ಸರಕಾರ ರಾಜ್ಯದ ಸಣ್ಣಪುಟ್ಟ ಸಮುದಾಯಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸುತ್ತಿರುವಾಗ ಲಕ್ಷಾಂತರ ಸಂಖ್ಯೆಯಲ್ಲಿ ಜನಸಂಖ್ಯೆ ಹೊಂದಿರುವ ಕ್ರೈಸ್ತ ಸಮುದಾಯ ರಾಜ್ಯದಾದ್ಯಂತ ಹರಡಿದ್ದು ಶಿಕ್ಷಣ, ಸಮಾಜಸೇವೆ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ರಾಜ್ಯದ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಜೊತೆಗೆ ಈ ಸಮುದಾಯ ಸರಕಾರದ ಜೊತೆಗೂಡಿ ಶ್ರಮಿಸುತ್ತಿದ್ದು, ಈ ಸಮುದಾಯವನ್ನು ಕಡೆಗಣಿಸಲು ಯತ್ನಿಸುತ್ತಿರುವುದು ರಾಜ್ಯದ ಕ್ರೈಸ್ತರಿಗೆ ಅತೀವ ನಿರಾಸೆಯುಂಟುಮಾಡಿದೆ. ರಾಜ್ಯದಾದ್ಯಂತ ಇರುವ ಬಡ ಹಾಗು ಆರ್ಥಿಕವಾಗಿ ಹಿಂದುಳಿದ ಕ್ರೈಸ್ತರು ಸರಕಾರಿ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಬಹಳಷ್ಟು ಬಡ ಕ್ರೈಸ್ತರು ಸರಕಾರದ ಯೋಜನೆಗಳನ್ನು ಅವಲಂಬಿಸಿದ್ದಾರೆ.
ಪ್ರಸ್ತಾಪಿತ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ, ಈವರೆಗೆ ಕ್ರೈಸ್ತರಿಗೆ ದೊರಕುತ್ತಿದ್ದ ಸವಲತ್ತುಗಳೊಂದಿಗೆ ಅಲ್ಪಸಂಖ್ಯಾತ ಇಲಾಖೆಯಿಂದ ನ್ಯಾಯಯುತವಾಗಿ ದೊರಕಬೇಕಿದ್ದ ಸೌಲಭ್ಯಗಳನ್ನೂ ಈ ನಿಗಮದಡಿಯಲ್ಲಿ ಸಿಗುವಂತೆ ಮಾಡಿ, ರಾಜ್ಯದ ಕ್ರೈಸ್ತರು ಗೌರವಯುತ ಜೀವನ ನಡೆಸಲು ಅನುವು ಮಾಡಿಕೊಡುವಂತೆ ಆಗ್ರಹಿಸಿದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ರೋಬರ್ಟ್ ಮಿನೇಜಸ್, ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕರ್ನಾಟಕ ಕ್ರೈಸ್ತ ಸಂಘಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟ ಗೌರವಾಧ್ಯಕ್ಷ ಲೂವಿಸ್ ಲೋಬೊ, ಅಧ್ಯಕ್ಷ ಡಾ| ನೇರಿ ಕರ್ನೇಲಿಯೊ, ಸೈಂಟ್ ಮೇರಿಸ್ ಸೀರಿಯನ್ ಓರ್ಥೋಡೊಕ್ಸ್ ಕ್ಯಾಥೆಡ್ರಲ್ ಕಾರ್ಯದರ್ಶಿ ಆಲನ್ ರೋಹನ್ ವಾಝ್, ಟ್ರಸ್ಟಿ ಥೋಮಸ್ ಸುವಾರಿಸ್ ಇದ್ದರು
ಕ್ರೈಸ್ತ ಅಭಿವೃದ್ಧಿ ನಿಗಮ ರದ್ದತಿ ತರವಲ್ಲ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...