Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಗಂಡು ಮಗು ಹುಟ್ಟಿದರೆ ಮಾತ್ರ ಸಂತೋಷಪಡಬೇಕೇ?: ಮಹಿಳಾ ಕಾಂಗ್ರೆಸ್ ಪ್ರಶ್ನೆ

ಗಂಡು ಮಗು ಹುಟ್ಟಿದರೆ ಮಾತ್ರ ಸಂತೋಷಪಡಬೇಕೇ?: ಮಹಿಳಾ ಕಾಂಗ್ರೆಸ್ ಪ್ರಶ್ನೆ

ಸುದ್ದಿಕಿರಣ ವರದಿ
ಶನಿವಾರ, ಜನವರಿ 1, 2022

ಗಂಡು ಮಗು ಹುಟ್ಟಿದರೆ ಮಾತ್ರ ಸಂತೋಷಪಡಬೇಕೇ?: ಮಹಿಳಾ ಕಾಂಗ್ರೆಸ್ ಪ್ರಶ್ನೆ

ಉಡುಪಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಪಕ್ಷದ ನಾಯಕರ ಸಂತೋಷವನ್ನು 25 ವರ್ಷಗಳ ನಂತರ ಗಂಡು ಮಗು ಹುಟ್ಟಿದ ಸಂತೋಷಕ್ಕೆ ಹೋಲಿಸಿ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪನವರ ಮನಃಸ್ಥಿತಿ ಅಪಾಯಕಾರಿಯಾಗಿದೆ. ಒಬ್ಬ ಸಚಿವನಾಗಿ ಗಂಡು ಹಾಗೂ ಹೆಣ್ಣಿನ ಬಗ್ಗೆ ಅವರಲ್ಲಿರುವ ತಾರತಮ್ಯ ಹೇಸಿಗೆ ಹುಟ್ಟಿಸುತ್ತಿದೆ. ಗಂಡು ಮಗು ಹುಟ್ಟಿದರೆ ಮಾತ್ರ ಸಂತೋಷ ಪಡಬೇಕೇ? ಹೆಣ್ಣು ಮಗು ಹುಟ್ಟಿದರೆ ಸಂತೋಷಪಡಬಾರದೆಂದಿದೆಯೇ? ಇದು ಯಾವ ರೀತಿಯ ಮನಃಸ್ಥಿತಿ ನಿಮ್ಮದು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಮಕ್ಕಳಿಲ್ಲದ ದಂಪತಿಗೆ 25 ವರ್ಷಗಳ ಬಳಿಕ ಮಗು ಹುಟ್ಟಿದಷ್ಟು ಸಂತೋಷವಾಗಿದೆ ಎಂದರೆ ಒಪ್ಪಬಹುದಿತ್ತೇನೋ!

ಅದು ಬಿಟ್ಟು ಈ ರೀತಿಯ ಬಾಲಿಶ ಹೇಳಿಕೆ ನೀಡುವುದು ಈಶ್ವರಪ್ಪನವರಿಗೆ ಶೋಭೆ ತರುವುದಿಲ್ಲ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದೊಮ್ಮೆ ತೃತೀಯ ಲಿಂಗಿಗಳ ಬಗ್ಗೆ ಅರ್ಥವಿಲ್ಲದ ಹೇಳಿಕೆ ನೀಡಿ ತಮ್ಮ ಅರೆಜ್ಞಾನ ಪ್ರದರ್ಶಿಸಿದ್ದ ಈಶ್ವರಪ್ಪ, ಮತ್ತೆ ಅದೇ ರೀತಿಯ ತಪ್ಪು ಮಾಡುತ್ತಿದ್ದಾರೆ.

ಯಾವುದೇ ತಂದೆ- ತಾಯಿಗೆ ಮಗು ಹುಟ್ಟಿದಾಗ ಅದು ಹೆಣ್ಣಿರಲಿ, ಗಂಡಿರಲಿ ಸಂತೋಷವಾಗುವುದು ಸ್ವಾಭಾವಿಕ. ಹೀಗಿರುವಾಗ ಈ ಸಂತೋಷ ಕೇವಲ ಗಂಡು ಮಕ್ಕಳು ಹುಟ್ಟಿದಾಗ ಎನ್ನುವ ಅರ್ಥ ಬರುವಂತೆ ಹೇಳಿಕೆ ನೀಡಿರುವುದು ಹೆಣ್ಣಿನ ಬಗ್ಗೆ ಅವರಿಗಿರುವ ತಾತ್ಸಾರ ಮನೋಭಾವನೆಯನ್ನು ಎತ್ತಿತೋರಿಸುತ್ತದೆ.

ಈಚಿನ ದಿನಗಳಲ್ಲಿ ಬಿಜೆಪಿ ನಾಯಕರ ನಾಲಿಗೆಗೆ ಲಗಾಮು ಇಲ್ಲದಂತಾಗಿದೆ. ದಿನಕ್ಕೊಬ್ಬರಂತೆ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿ ತನ್ನ ಸಂಪುಟ ಸದಸ್ಯರ ಮೇಲೆ ಹಿಡಿತ ಸಾಧಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗೀತಾ ವಾಗ್ಳೆ ಆರೋಪಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!