Tuesday, May 17, 2022
Home ಸಮಾಚಾರ ರಾಜ್ಯ ವಾರ್ತೆ ಸಾಮಾಜಿಕ ಶೈಕ್ಷಣಿಕ ಗಣತಿ ವರದಿ ಅಧಿಕೃತಗೊಂಡಿಲ್ಲ

ಸಾಮಾಜಿಕ ಶೈಕ್ಷಣಿಕ ಗಣತಿ ವರದಿ ಅಧಿಕೃತಗೊಂಡಿಲ್ಲ

ಸಾಮಾಜಿಕ ಶೈಕ್ಷಣಿಕ ಗಣತಿ ವರದಿ ಅಧಿಕೃತಗೊಂಡಿಲ್ಲ

(ಸುದ್ದಿಕಿರಣ ವರದಿ)
ಉಡುಪಿ: ಸಾಮಾಜಿಕ ಶೈಕ್ಷಣಿಕ ಗಣತಿ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗ ಸರಕಾರಕ್ಕೆ ಸಲ್ಲಿಸಿಲ್ಲ ಎಂಬ ಬಗ್ಗೆ ಈಚೆಗೆ ಬಹಳ ಚರ್ಚೆ ನಡೆಯುತ್ತಿದೆ. ಹಿಂದಿನ ಸಿದ್ಧರಾಮಯ್ಯ ಸರಕಾರದ ಅವಧಿಯಲ್ಲಿ ಈ ಸಾಮಾಜಿಕ ಶೈಕ್ಷಣಿಕ ಗಣತಿ ವರದಿ ಸಿದ್ಧವಾಗಿದ್ದರೂ, ಆಯೋಗದ ಸದಸ್ಯ ಕಾರ್ಯದರ್ಶಿ ಅದಕ್ಕೆ ಸಹಿ ಮಾಡಿಲ್ಲ. ಆದ್ದರಿಂದ ಅದು ಅಧಿಕೃತಗೊಂಡಿಲ್ಲ. ಹಾಗಾಗಿ ಅದು ಅಮಾನ್ಯವಾಗಿದೆ. ವರದಿಯನ್ನು ಮತ್ತೆ ಪರಿಶೀಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವರದಿಯನ್ನು ಇನ್ನೂ ಸರಕಾರಕ್ಕೆ ಕಳಿಸಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.

ಬುಧವಾರ ರಾಜ್ಯ ಸಮಾಜ ಕಲ್ಯಾಣ, ಹಿಂಗುಳಿದ ವರ್ಗಗಳ ಕಲ್ಯಾಣ ಮತ್ತು ಪ. ಪಂ.ಗಳ ಕಲ್ಯಾಣ ಇಲಾಖೆಗಳ ವತಿಯಿಂದ ಆಯೋಜಿಸಲಾಗಿದ್ದ ಅಂತ್ಯೋದಯ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಾತಿಗಣತಿ ವರದಿ ಬಗ್ಗೆ ಇಂದು ಬಹಳ ಚರ್ಚೆ ನಡೆಯುತ್ತಿದೆ. ಆದರೆ, ವಾಸ್ತವದಲ್ಲಿ ಜಾತಿಗಳನ್ನು ಗಣತಿ ಮಾಡಿದ ವರದಿಯಲ್ಲ. ರಾಜ್ಯದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸರ್ವೇ ವರದಿ ಎಂದ ಅವರು, ತಮ್ಮ ಆಯೋಗದ ಈ ವರದಿ ಕೇವಲ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿಗೆ ಶಿಫಾರಸು ಮಾಡುತ್ತದೆಯೇ ಹೊರತು ರಾಜಕೀಯ ಮೀಸಲಾತಿಗೆ ಶಿಫಾರಸು ಮಾಡುವುದಿಲ್ಲ. ಈ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯದಿಂದ ರಾಜಕೀಯ ಮೀಸಲಾತಿಗೆ ತಮ್ಮ ಬಳಿ ಒತ್ತಾಯಿಸುತ್ತಾರೆ ಎಂದರು.

ಯಾವುದೇ ಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿಸುವುದು ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಅದಕ್ಕೆ ಪ್ರತ್ಯೇಕ ಇಲಾಖೆ ಇದೆ ಎಂದವರು ಮಾಹಿತಿ ನೀಡಿದರು.

ಯಾವ ಜಾತಿ ಯಾವ ಪ್ರವರ್ಗಕ್ಕೆ ಸೇರುತ್ತದೆ ಎಂಬ ಬಗ್ಗೆ ಮಾಹಿತಿ ಹೊತ್ತಗೆಯನ್ನು ಪ್ರತಿಯೊಂದು ಗ್ರಾ.ಪಂ.ಗಳಿಗೆ ನೀಡಲಾಗುತ್ತದೆ. ಅದರಿಂದ ಗ್ರಾ.ಪಂ.ಗಳ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯಗಳನ್ನು ನೀಡುವಾಗ ಅಧಿಕಾರಿಗಳಿಗೆ ಉಂಟಾಗುವ ಜಾತಿಯ ಗೊಂದಲ ನಿವಾರಣೆಯಾಗಲಿದೆ ಎಂದವರು ಹೇಳಿದರು.

ಕುಡುಬಿ ಸಮುದಾಯಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರುವ ಅರ್ಹತೆ ಮತ್ತು ಅಗತ್ಯತೆ ಇದೆ. ಆದ್ದರಿಂದ ಅದನ್ನು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವಂತೆ ಸಚಿವ ಕೋಟ ಅವರಿಗೆ ಸಲಹೆ ಮಾಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!