Monday, July 4, 2022
Home ಸಮಾಚಾರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಹುಮತದೊಂದಿಗೆ ಗರಿಷ್ಠ ಸ್ಥಾನ ಗೆಲ್ಲುವ ಗುರಿ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಹುಮತದೊಂದಿಗೆ ಗರಿಷ್ಠ ಸ್ಥಾನ ಗೆಲ್ಲುವ ಗುರಿ

ಉಡುಪಿ: ಬಿಜೆಪಿ ಎಲ್ಲ ಸ್ತರಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಈ ಸಂದರ್ಭದಲ್ಲಿ ಘೋಷಣೆಯಾಗಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಬಿಜೆಪಿ 130ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳನ್ನು ಗೆಲ್ಲಲಿದೆ. ಡಿ. 22 ಮತ್ತು 27ರಂದು ಜಿಲ್ಲೆಯಲ್ಲಿ ನಡೆಯಲಿರುವ ಗ್ರಾ. ಪಂ. ಚುನಾವಣೆಯಲ್ಲಿ ಬಹುಮತ ಸಾಧಿಸುವ ಜೊತೆಗೆ ಎಲ್ಲಾ ಗ್ರಾ. ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗರಿಷ್ಠ ಸ್ಥಾನ ಗೆಲ್ಲುವುದು ಬಿಜೆಪಿ ಗುರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಗ್ರಾ. ಪಂ. ಚುನಾವಣೆಯ ಪೂರ್ವಸಿದ್ಧತೆಗಾಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾ. ಪಂ. ಚುನಾವಣೆ ಎದುರಿಸಲು ಸರ್ವ ಸನ್ನದ್ಧವಾಗಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷದ ರಾಜ್ಯ ನಾಯಕರ ಸಹಭಾಗಿತ್ವದೊಂದಿಗೆ ಜಿಲ್ಲೆಯ 2 ಕಡೆಗಳಲ್ಲಿ ನಡೆದ ಮಂಡಲವಾರು ಗ್ರಾಮ ಸ್ವರಾಜ್ಯ ಸಮಾವೇಶ ಅತ್ಯಂತ ಯಶಸ್ವಿಯಾಗಿದ್ದು ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹಾಗೂ ಹೊಸ ಹುಮ್ಮಸ್ಸು ಮೂಡಿಸಿದೆ. ರಾಜ್ಯ ಬಿಜೆಪಿ ಸೂಚನೆಯಂತೆ ಪ್ರತೀ ಬೂತ್ ಮಟ್ಟದಲ್ಲಿ ಪಂಚರತ್ನ, ಪೇಜ್ ಪ್ರಮುಖ್ ನೇಮಕ, ಗ್ರಾ. ಪಂ. ಮಟ್ಟದಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ಆಯೋಜನೆ ಪಕ್ಷ ಸಂಘಟನೆಗೆ ಶಕ್ತಿ ತುಂಬಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಚೈತನ್ಯ ತುಂಬಿದೆ ಎಂದರು.
ಪರಿಣಾಮಕಾರಿ ಚುನಾವಣಾ ಪೂರ್ವ ತಯಾರಿಗಾಗಿ ಮಂಡಲವಾರು ಚುನಾವಣಾ ಪ್ರಭಾರಿಗಳ ಜೊತೆಗೆ ಪ್ರತೀ ಮಹಾ ಶಕ್ತಿಕೇಂದ್ರ ವ್ಯಾಪ್ತಿಗೆ ಒಬ್ಬರಂತೆ ಪ್ರಮುಖರನ್ನು ನಿಯೋಜಿಸಲಾಗಿದೆ. ಒಮ್ಮತದ ಅಭ್ಯರ್ಥಿಗಳ ಆಯ್ಕೆ, ಮತದಾರರ ಪಟ್ಟಿ ಪರಿಶೀಲನೆ, ಬೂತ್ ಪ್ರಮುಖರೊಂದಿಗೆ ಸಭೆ, ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಾಧನೆ ಹಾಗೂ ಜನಪ್ರತಿನಿಧಿಗಳ ಅಭಿವೃದ್ಧಿ ಕೆಲಸ ಕಾರ್ಯಗಳ ಮಾಹಿತಿ, ಅಭ್ಯರ್ಥಿ ಪರಿಚಯ ಪತ್ರದ ಜೊತೆಗೆ ಚುನಾವಣಾ ಪ್ರಣಾಳಿಕೆ ಇತ್ಯಾದಿ ಪೂರ್ವಸಿದ್ಧತೆಗಳೊಂದಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತ ಪರಿಶ್ರಮದ ಮೂಲಕ ನಿಗದಿತ ಗುರಿ ತಲುಫುವ ತನಕ ವಿರಮಿಸದೆ ಎಲ್ಲಾ ಕಾರ್ಯಕರ್ತರು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಕುಯಿಲಾಡಿ ಕರೆ ನೀಡಿದರು.
ಬಿಜೆಪಿ ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಗ್ರಾ. ಪಂ. ಚುನಾವಣೆ ಪಕ್ಷ ಸಂಘಟನೆಗೂ ಭದ್ರ ಬುನಾದಿಯಾಗಲಿದೆ. ಈ ನಿಟ್ಟಿನಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಪಕ್ಷ ಪ್ರಮುಖರು ಗ್ರಾ. ಪಂ. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಡಳಿತದ ಸುವರ್ಣ ಯುಗದಲ್ಲಿ ಅಭಿವೃದ್ಧಿಯ ಶಕೆ ಮುಂದೆ ಸಾಗಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಗ್ರಾಮ ಪಂಚಾಯತ್ ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳ ಜವಾಬ್ದಾರಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಇದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ ಸ್ವಾಗತಿಸಿ, ಸದಾನಂದ ಉಪ್ಪಿನಕುದ್ರು ನಿರೂಪಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!