Saturday, July 2, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ `ಗುಣಮಟ್ಟದ ಜನೌಷಧ ಮಿತವ್ಯಯವಾಗಿವೆ'

`ಗುಣಮಟ್ಟದ ಜನೌಷಧ ಮಿತವ್ಯಯವಾಗಿವೆ’

ಉಡುಪಿ: ಪ್ರಧಾನಮಂತ್ರಿ ಜನೌಷಧ ಕೇಂದ್ರಗಳ ಮೂಲಕ ಅತ್ಯಂತ ಕಡಿಮೆ ದರ ಹಾಗೂ ಉತ್ತಮ ಗುಣಮಟ್ಟದ ಔಷಧ ನೀಡಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅದರ ಪ್ರಯೋಜನ ಪಡೆಯಬೇಕು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದರು.

ಭಾನುವಾರ ಬ್ರಹ್ಮಾವರದಲ್ಲಿ ನಡೆದ ಜನೌಷಧ ದಿನಾಚರಣೆ ಅಂಗವಾಗಿ ವೀಡಿಯೊ ಕಾನ್ಫರೆನ್ಸ್ ಮೂಲಕ ಜನೌಷಧಿ ಪರಿಯೋಜನೆ ಬಗ್ಗೆ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ
ದೇಶದಲ್ಲಿ 2015ರಲ್ಲಿ ನಡೆದ ಸರ್ವೇಯಲ್ಲಿ ದೇಶದ ನಾಗರಿಕರು ತಮ್ಮ ದುಡಿಮೆ ಹಣವನ್ನು ಯಾವ್ಯಾವ ಉದ್ದೇಶಕ್ಕೆ ಬಳಸುತ್ತಾರೆ ಎಂಬುದರ ಕುರಿತು ಪ್ರಧಾನಿ ಪರಿಶೀಲಿಸಿದಾಗ, ಆರೋಗ್ಯದ ಉದ್ದೇಶಕ್ಕಾಗಿ ತಮ್ಮ ಗಳಿಕೆಯ ಶೇ. 15ರಿಂದ 30ರಷ್ಟನ್ನು ಮಧ್ಯಮ ಮತ್ತು ಕೆಳವರ್ಗದ ಮಂದಿ ಬಳಸುತ್ತಿದ್ದಾರೆ. ಅದರಿಂದಾಗಿ ಸುಮಾರು 1.25 ಕೋಟಿ ಮಂದಿ ಬಡತನರೇಖೆಗಿಂತ ಕೆಳಗಡೆ ಬರುತ್ತಿದ್ದು, ಬಜೆಟ್ ನಲ್ಲಿ 2.33 ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಆ ಅನುದಾನದಲ್ಲಿ ಆಯುಷ್ಮಾನ್ ಭಾರತ್, ಇಂದ್ರಧನುಷ್, ಗರ್ಭಿಣಿಯರಿಗೆ ನೆರವು, ಪೋಷಣ್ ಆಭಿಯಾನ, ಸ್ವಚ್ಛ ನೀರು ಅಭಿಯಾನ ಆಯೋಜಿಸಲಾಗುತ್ತಿದೆ ಎಂದರು.

ಅಪನಂಬಿಕೆ ಬೇಡ
ಕಡಿಮೆ ಬೆಲೆಯಲ್ಲಿ ಔಷಧ ಲಭಿಸುತ್ತಿದೆ ಎಂಬ ಕಾರಣಕ್ಕೆ ಔಷಧಗಳ ಗುಣಮಟ್ಟದ ಬಗ್ಗೆ ಅಪನಂಬಿಕೆ ಬೇಡ. ಪ್ರತೀ ಔಷಧಿಯನ್ನು ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಿ, ಉತ್ತಮ ಗುಣಮಟ್ಟದ ಔಷಧಗಳನ್ನು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅದರ ಪ್ರಯೋಜನ ಪಡೆಯಬೇಕು.

ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 49 ಜನೌಷಧಿ ಕೇಂದ್ರಗಳಿದ್ದು, ಪ್ರಧಾನಿ ಸೂಚನೆಯಂತೆ ಅದನ್ನು 75ಕ್ಕೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿ. ವಿ. ಹೇಳಿದರು.

ವೀಡಿಯೊ ಕಾನ್ಫರೆನ್ಸ್ ಮೂಲಕ ಜನೌಷಧಿ ಪರಿಯೋಜನೆ ಬಗ್ಗೆ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿದ ಪ್ರಧಾನಿ ಮೋದಿ, ಮಂಗಳೂರಿನ ವೈದ್ಯ ಡಾ. ಪದ್ಮನಾಭ ಕಾಮತ್ ಜೊತೆ ಮಾತನಾಡಿದರು.

ಅವರು ತಮ್ಮ ಜನೌಷಧಿ ಕೆಂದ್ರದಲ್ಲಿ ಔಷಧ ಮಾರಾಟ ಮಾತ್ರವಲ್ಲದೆ, ಸಾರ್ವಜನಿಕರಿಗೆ ಇ.ಸಿ.ಜಿ. ಪರೀಕ್ಷೆ ನಡೆಸುತ್ತಿದ್ದು, ಅದರಿಂದ ಇದುವರೆಗೆ 100ಕ್ಕೂ ಹೆಚ್ಚು ಮಂದಿಗೆ ಹೃದಯಾಘಾತವಾಗುವುದನ್ನು ಮುಂಚಿತವಾಗಿಯೇ ಪತ್ತೆಹಚ್ಚಿ, ಅವರ ಪ್ರಾಣ ಉಳಿಸಿದ್ದು, ಅದರಿಂದ ಜನೌಷಧ ಕೇಂದ್ರ ಜನೋಪಯೋಗಿಯಾಗಿರುವ ಕುರಿತು ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ದೇಶದ 7,500ನೇ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ವರ್ಚ್ಯುವಲ್ ವೇದಿಕೆ ಮೂಲಕ ಪ್ರಧಾನಿ ಉದ್ಘಾಟಿಸಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ರಾಜ್ಯ ಹಿಂದುಳಿದ ವರ್ಗಗಳ ಅಯೋಗ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ, ಉಡುಪಿ ಜನೌಷಧಿ ಕೇಂದ್ರಗಳ ನೋಡೆಲ್ ಅಧಿಕಾರಿ ಡಾ. ಅನಿಲಾ ಮೊದಲಾದವರಿದ್ದರು.

ಆರಂಭದಲ್ಲಿ ಮೂದಲಿಸಿದ್ದರು!
ಕಳೆದ ಮೂರು ವರ್ಷಂದ ಜನೌಷಧ ಅಭಿಯಾನದಲ್ಲಿ ಭಾಗವಹಿಸಿರುವುದಕ್ಕೆ ಸಂತಸವಿದೆ. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ತುರ್ತುಚಿಕಿತ್ಸೆ ಸಿಗದೆ ಹೃದಯಾಘಾತದಿಂದ ಮೃತಪಡುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಈ ಸಮಸ್ಯೆಗೆ ಮೂಲದಲ್ಲಿಯೇ ಪರಿಹಾರ ನೀಡಲು ಜನೌಷಧ ಕೇಂದ್ರಗಳಲ್ಲಿ ಇಸಿಜಿ ಯಂತ್ರ ಅಳವಡಿಸಲಾಯಿತು. ಆರಂಭದಲ್ಲಿ ಕೆಲವರು ಹುಚ್ಚು ಎಂದು ಮೂದಲಿಸಿದರು. ಜನೌಷಧಕ್ಕೆ ಬೆಂಬಲವಾಗಿ ನಿಂತಿದ್ದಕ್ಕೆ ಹಲವು ಪ್ರಶ್ನೆಗಳು, ಟೀಕೆಗಳು ಎದುರಾದವು.ಧೃತಿಗೆಡದೆ ಮತ್ತೆ 6 ಜನೌಷಧ ಕೇಂದ್ರಗಳಲ್ಲಿ ಇಸಿಜಿ ಯಂತ್ರ ಅಳವಡಿಸಿದೆ. ಅದರ ಫಲವಾಗಿ ಇದುವರೆಗೆ 100ಕ್ಕೂ ಹೆಚ್ಚು ಮಂದಿಯಲ್ಲಿ ಹೃದ್ರೋಗ ಸಮಸ್ಯೆ ಪತ್ತೆಹಚ್ಚಿ ಅವರ ಜೀವ ಉಳಿಸಲು ನೆರವಾಯಿತು ಎಂದು ಪ್ರಧಾನಿ ಮೋದಿ ಅವರಿಗೆ ಡಾ. ಪದ್ಮನಾಭ ಕಾಮತ್ ವಿವರಿಸಿದರು.
ಜನೌಷಧ ಕೇಂದ್ರಗಳಲ್ಲಿ ಇಸಿಜಿ ಸೇವೆ ಆರಂಭಿಸಿರುವುದನ್ನು ಶ್ಲಾಘಿಸಿದ ಪ್ರಧಾನಿ ಮೋದಿ ನಮ್ಮ ಕಲ್ಪನೆಗೆ ನೀವು ಮೂರ್ತರೂಪ ನೀಡಿದ್ದೀರಿ ಎಂದು ಅಭಿನಂದಿಸಿದರು.

ಲಭಿಸದ ಅವಕಾಶ
ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಬಳಿಯ ಜನೌಷಧ ಕೇಂದ್ರದ ಮಾಲೀಕ ಸುಂದರ ಪೂಜಾರಿ ಹಾಗೂ ಜನೌಷಧ ಫಲಾನುಭವಿ ದಿವ್ಯಾಂಗ ಸುಧೀರ್ ಪೂಜಾರಿ ಅವರೂ ಪ್ರಧಾನಿಯೊಂದಿಗಿನ ಸಂವಾದಕ್ಕೆ ಆಯ್ಕೆಯಾಗಿದ್ದರು. ಆದರೆ, ಅವರಿಬ್ಬರಿಗೂ ಮಾತನಾಡಲು ಅವಕಾಶ ಸಿಗಲಿಲ್ಲ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!