ಗೋಧಾಮದಲ್ಲಿ ದೀಪಾವಳಿ ಗೋಪೂಜೆ ಸಂಭ್ರಮ
ಹೆಬ್ರಿ, ನ. 6 (ಸುದ್ದಿಕಿರಣ ವರದಿ): ಇಲ್ಲಿಗೆ ಸಮೀಪದ ಮುನಿಯಾಲು ಸಂಜೀವಿನಿ ಫಾರ್ಮ್ ಮತ್ತು ಡೇರಿ ಗೋಧಾಮದಲ್ಲಿ ದೇಶಿಯ ತಳಿ ಹಸುಗಳಿಗೆ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ನಡೆಯಿತು.
ಸಾಂಕೇತಿಕವಾಗಿ ಗೋವುಗಳಿಗೆ ಆರತಿ ಬೆಳಗಿ, ಪ್ರಸಾದ ತಿನ್ನಿಸುವ ಮೂಲಕ ಮೂಡಬಿದಿರೆ ಜೈನ ಮಠದ ಭಟ್ಟಾರಕ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.
ಗೋಪೂಜೆ ಆದ್ಯ ಕರ್ತವ್ಯ
ಗೋಪೂಜೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಗೋವಿನ ದೇಹದಲ್ಲಿ ಹಲವಾರು ದೇವತೆಗಳ ವಾಸಸ್ಥಾನವಿದೆ. ಆರ್ಯರು ಗೋವುಗಳನ್ನು ಸಾಕುವ ಮೂಲಕ ನಮಗೆ ಒಂದು ಸಂಸ್ಕೃತಿಯನ್ನು ತಿಳಿಸಿಕೊಟ್ಟಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
ರಾಮಕೃಷ್ಣ ಪರಮಹಂಸರ ಧ್ಯೇಯ ಪಾಲಿಸುತ್ತಾ, ದೇಸಿ ತಳಿ ಸಾಕುವ ಉದ್ಯಮಿ ರಾಮಕೃಷ್ಣ ಆಚಾರ್ ಅರಿಗೆ ಅಭಿನಂಧಿಸುವುದಾಗಿ ತಿಳಿಸಿದ ಸ್ವಾಮೀಜಿ, ದೇಸಿ ತಳಿಗಳನ್ನು ಸಂರಕ್ಷಿಸಿ ಬೆಳೆಸುವುದು ನಿಜಕ್ಕೂ ಸವಾಲಿನ ಕೆಲಸ. ಆಚಾರ್ ಅವರು ಮುನಿಯಾಲಿನಂಥ ಪರಿಸರದಲ್ಲಿ ವಿಸ್ತಾರವಾದ ಜಾಗದಲ್ಲಿ ಗೋಶಾಲೆ ಸ್ಥಾಪಿಸಿ ಜನತೆಗೆ ಗೋವಿನ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಿರುವ ಕೆಲಸ ಶ್ಲಾಘನೀಯ ಎಂದರು.
ಗುರುತುಪತ್ರಕ್ಕೆ ಸಲಹೆ
ಸರ್ಕಾರ ಗೋವುಗಳನ್ನು ಸಾಕುವ ವ್ಯಕ್ತಿಗಳನ್ನು ಗುರುತಿಸಿ, ಗೋವುಗಳನ್ನು ತರುವ ಸಂದರ್ಭ ಕೆಲವು ಸಂಘಟನೆ ಮತ್ತು ಆರಕ್ಷಕ ಇಲಾಖೆಯಿಂದ ಉಂಟಾಗುವ ಸಮಸ್ಯೆಗಳಿಂದ ಪಾರಾಗಲು ನೈಜ ಗೋಪಾಲಕರಿಗೆ ಗುರುತು ಪತ್ರ ನೀಡುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಚಿವ ಸುನೀಲ್ ಕುಮಾರ್ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಕೊರಾನಾದಿಂದ ಅವಕಾಶ
ಮುಖ್ಯ ಅತಿಥಿ ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕೋವಿಡ್ ನಮಗೆ ದೇಶಿ ಸಂಸ್ಕೃತಿಯನ್ನು ಕಲಿಯಲು ಬಹಳಷ್ಟು ಅವಕಾಶ ಕಲ್ಪಿಸಿದೆ.
ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಮಾಡಿದ್ದ ಜನತೆ ಇದೀಗ ಕೊರಾನಾದಿಂದಾಗಿ ದೇಶಿ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು ಸಂತಸದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಾಂಡೇಶ್ವರ ಯೋಗ ಗುರುಕುಲದ ಡಾ. ವಿಜಯ ಮಂಜರ್, ಗೋಮಾತೆ ಪ್ರಬಲ ಶಕ್ತಿ. ಗೋವಿಗಿರುವ ದಿವ್ಯ ಶಕ್ತಿ ಬೇರೆ ಯಾವ ಪ್ರಾಣಿಗೂ ಇಲ್ಲ. ಗೋವಿಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ. ಗೋವು ಸಾಕಣೆ ಹವ್ಯಾಸ ಬೆಳೆಸಿಕೊಂಡಿರುವ ಉದ್ಯಮಿ ರಾಮಕೃಷ್ಣ ಆಚಾರ್ ಸಮಾಜಕ್ಕೆ ಮಾದರಿ ಎಂದರು.
ಭಾರತದಲ್ಲಿ ತಂತ್ರಜ್ಞಾನ ಇನ್ನಷ್ಟು ಬೆಳೆಯಬೇಕು. ಹಾಗಾದಾಗ ಮಾತ್ರ ಕೃಷಿ ಸಂಸ್ಕೃತಿ ಮುಂದುವರಿಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮೀಣ ಬದುಕು ಕಟ್ಟಿಕೊಳ್ಳಿ
ಗೋಧಾಮ ಟ್ರಸ್ಟ್ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಚೀನ ಭಾರತದ ಗೋವಿನ ವಿವಿಧ ತಳಿಗಳನ್ನು ಅಭಿವೃದ್ಧಿ ಮಾಡುವುದರೊಂದಿಗೆ ಸ್ವದೇಶಿ ತಳಿಗಳನ್ನು ಸಂರಕ್ಷಿಸಿ ಅವುಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಮೂಲ ಉದ್ದೇಶ. ಜೊತೆಗೆ ನೆಲ ಜಲವನ್ನು ಸಂರಕ್ಷಿಸುವುದೂ ಆಶಯ ಎಂದರು.
ಮುಂದಿನ ಪೀಳಿಗೆಗೆ ಗ್ರಾಮೀಣ ಬದುಕನ್ನು ಪರಿಚಯಿಸುವುದು, ಯುವ ಜನತೆಯನ್ನು ಹೈನುಗಾರಿಕೆಗೆ ಪ್ರೇರೇಪಿಸುವ ಆಶಯ ಹೊಂದಲಾಗಿದ್ದು, ಇಂದಿನ ಯುವಜನತೆ ಕೇವಲ ನಗರ ಜೀವನಕ್ಕೆ ಒಗ್ಗಿಕೊಳ್ಳದೆ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳಲು ಪ್ರರೇಪಿಸಬೇಕು ಎಂದರು.
ಇಲ್ಲಿ ಗೀರ್, ಕಾಂಕ್ರಿಜ್, ಸಾಯಿವಾಲದಂಥ ಹಲವು ಜಾತಿಯ ದೇಶಿಯ ತಳಿಗಳನ್ನು ಸಾಕುತ್ತಿದ್ದೇವೆ. ಇಂದಿನ ಹಲವು ರೋಗಗಳಿಗೆ ರಾಸಾಯನಿಕ ಮಿಶ್ರಿತ ಹಾಲು ಕಾರಣವಾಗಿರುವುದರಿಂದ ರೋಗ ಮುಕ್ತ ಸಮಾಜಕ್ಕೆ ಪ್ರಯತ್ನಿಸುವುದೂ ನಮ್ಮ ಕರ್ತವ್ಯ ಎಂದರು.
ಜೊತೆಗೆ ಗೋವಿನ ಸೇವೆ ಮಾಡಬೇಕು, ಪೂಜೆ ಮಾಡಬೇಕೆಂಬ ಆಸಕ್ತರಿಗೆ ಆದಿತ್ಯವಾರದಂದು ಗೋಪೂಜೆ, ಗೋಗ್ರಾಸ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಕಳದ ಉಪನ್ಯಾಸಕಿ ಅಕ್ಷಯ ಗೋಖಲೆ, ಮನುಷ್ಯರಿಗೆ ಗೋವಿನಿಂದ ಸಿಗುವ ಉಪಕಾರಗಳ ಬಗ್ಗೆ ಮಾಹಿತಿ ನೀಡಿ ಗೋ ಸ್ಮರಣೆ ಮಾಡಿದರು.
ರಾಮಕೃಷ್ಣ ಆಚಾರ್ಯ ಪತ್ನಿ, ಸಂಜೀವಿನಿ ಫಾರ್ಮ್ ಮತ್ತು ಡೇರಿ ಟ್ರಸ್ಟಿ ಸವಿತಾ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ| ಜಯಪ್ರಕಾಶ ಮಾವಿನಕುಳಿ ನಿರೂಪಿಸಿದರು.
ಕಾರ್ಕಳದ ಪೊಲೀಸ್ ವೃತ್ತನಿರೀಕ್ಷಕ ಸಂಪತ್ ಕುಮಾರ್ ಮೊದಲಾದವರಿದ್ದರು