ನೀಲಾವರ ಗೋಶಾಲೆಯಲ್ಲಿ ಗೋಮಯ ಆಧಾರಿತ ಬಯೋ ವಿದ್ಯುತ್ ಘಟಕ ಸ್ಥಾಪನೆಗೆ ಸಿದ್ಧತೆ
(ಸುದ್ದಿಕಿರಣ ವರದಿ)
ಬ್ರಹ್ಮಾವರ: ಕೇಂದ್ರ ಸರಕಾರದ ನವೀಕಿಸಬಹುದಾದ ಇಂಧನ ಮಂತ್ರಾಲಯ ವತಿಯಿಂದ ಇಲ್ಲಿಗೆ ಸಮೀಪದ ನೀಲಾವರ ಗೋ ಶಾಲೆಯಲ್ಲಿ ಗೋಮಯ (ಸೆಗಣಿ) ಆಧಾರಿತ ರಾಜ್ಯದ ಚೊಚ್ಚಲ ಬಯೋ ವಿದ್ಯುತ್ ಘಟಕ ಸ್ಥಾಪನೆಗೆ ಸಿದ್ಧತೆಗಳು ಆರಂಭಗೊಂಡಿವೆ.
ಬೆಂಗಳೂರಿನಲ್ಲಿ ಚಾತುರ್ಮಾಸ್ಯ ವ್ರತದಲ್ಲಿದ್ದ ಸಂದರ್ಭ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿ ಮಾಡಿದ್ದ ಇಲಾಖೆಯ ರಾಜ್ಯ ಸಚಿವ ಭಗವಂತ್ ಖೂಬಾ ಈ ಬಗ್ಗೆ ಸಮಾಲೇಚನೆ ನಡೆಸಿದ್ದರು.
ಗೋಮಯವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ, ಭವಿಷ್ಯದ ಭರವಸೆಯ ಇಂಧನ ಮೂಲವಾಗಿದ್ದು ಅದರಿಂದ ಗೋರಕ್ಷಣೆ ಕಾರ್ಯಕ್ಕೆ ಬಲ ಬಂದಂತಾಗುತ್ತದೆ. ಜೊತೆಗೆ ಪರಿಸರಸ್ನೇಹಿ ಯೋಜನೆಯಾಗಿರುವುದರಿಂದ ಕೇಂದ್ರ ಸರಕಾರ ಈ ಬಗ್ಗೆ ವಿಶೇಷ ಪ್ರೋತ್ಸಾಹ ನೀಡಲು ಉದ್ದೇಶಿಸಿರುವುದಾಗಿ ಸಚಿವ ಖೂಬಾ ತಿಳಿಸಿದ್ದರು. ಶ್ರೀಮಠದ ಗೋಶಾಲೆಯಲ್ಲಿ ಇಲಾಖೆ ವತಿಯಿಂದ ಯೋಜನೆ ಕಾರ್ಯಾನುಷ್ಠಾನಗೊಳಿಸುವುದಾಗಿ ತಿಳಿಸಿದ್ದರು.
ಇದೀಗ ಇಲಾಖೆ ಸೂಚನೆಯಂತೆ ಬಯೋ ಗ್ಯಾಸ್ ಮತ್ತು ಬಯೋ ವಿದ್ಯುತ್ ಸ್ಥಾವರಗಳ ಅನುಷ್ಠಾನದಲ್ಲಿ ವಿಶೇಷ ಪರಿಣತಿ ಪಡೆದಿರುವ ಪಂಜಾಬ್ ರಿನೀವೇಬಲ್ ಎನರ್ಜಿ ಸಿಸ್ಟಮ್ ಪ್ರೈ ಲಿ.ನ ತಜ್ಞ ಇಂಜಿನಿಯರುಗಳಾದ ಲೋಕೇಂದ್ರ ಜೋಶಿ ಮತ್ತು ರಾಜೇಶ್ ಅಯ್ಯಪ್ಪಸೂರ್ ಅವರು ನೀಲಾವರ ಗೋಶಾಲೆಗೆ ಆಗಮಿಸಿ ಸ್ಥಾವರ ಸ್ಥಾಪನೆ ಬಗ್ಗೆ ಯೋಜನೆ ಮತ್ತು ಅಂದಾಜು ಪಟ್ಟಿ ತಯಾರಿಯ ಸಮೀಕ್ಷೆ ನಡೆಸಿದರು.
ಗೋಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಶ್ರೀಕೃಷ್ಣನ ಊರಿನಲ್ಲಿ ಈ ಕಾರ್ಯ ನಿರ್ವಹಿಸಲು ಅವಕಾಶ ದೊರೆಯುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ದಿನವಹಿ 1,200 ಯುನಿಟ್ ವಿದ್ಯುತ್ ಉತ್ಪಾದನೆ
ನೀಲಾವರ ಗೋಶಾಲೆ ಮತ್ತು ಆಸುಪಾಸಿನ ಗೋಶಾಲೆಗಳು ಹಾಗೂ ಹೈನುಗಾರರಿಂದಲೂ ಈ ಘಟಕಕ್ಕೆ ಬೇಕಾದ ಗೋಮಯ ಪಡೆಯಲು ಅವಕಾಶವಿದೆ. ಪ್ರಸ್ತುತ ಇರುವ ಗೋವುಗಳ ಸಂಖ್ಯೆ ಮತ್ತು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕನಿಷ್ಠ 5 ಸಾವಿರ ಹಸುಗಳ ದಿನವಹಿ ಗೋಮಯವನ್ನು ಅಂದಾಜಿಸಿ ಯೋಜನೆ ಸಿದ್ಧಪಡಿಸಲಾಗುತ್ತದೆ. ಅದರಿಂದ ಕನಿಷ್ಠ ಅಂದಾಜು ದಿನವೊಂದಕ್ಕೆ 1,200 ಯುನಿಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಿದ್ದು ಜಿಲ್ಲೆಯ ಜನತೆಯ ಉಪಯೋಗಕ್ಕಾಗಿ ವಿದ್ಯುತ್ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡು ಮಾರಾಟ ಮಾಡಬಹುದು. ಉತ್ಪಾದನೆಯಾಗುವ ಸ್ಲರಿ (ಸೆಗಣಿ ಮಿಶ್ರಿತ ನೀರು) ಕೃಷಿಗೆ ಅತ್ಯುತ್ತಮವಾಗಿದ್ದು, ಜಿಲ್ಲೆಯ ರೈತರಿಗೆ ರಿಯಾಯಿತಿ ದರದಲ್ಲಿ ಟ್ಯಾಂಕರ್ ಮೂಲಕ ಮಾರಾಟ ಮಾಡುವುದರಿಂದಲೂ ಗೋಶಾಲೆಗೆ ಆದಾಯ ಬರಲು ಅವಕಾಶ ಇದೆ.
10 ಕೋ. ವೆಚ್ಚ
ಸ್ಥಾವರ ಸ್ಥಾಪನೆಗೆ ಅಂದಾಜು 10 ಕೋ. ರೂ. ವೆಚ್ಚವಾಗಬಹುದು. ಮುಂದಿನ 2-3 ತಿಂಗಳೊಳಗೆ ಯೋಜನಾ ವರದಿಯನ್ನು ಇಲಾಖೆಗೆ ಸಲ್ಲಿಸಿ ತಾತ್ವಿಕ ಅನುಮೋದನೆ ಮತ್ತು ಯೋಜನಾ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದು ಲೋಕೇಂದ್ರ ಜೋಶಿ ತಿಳಿಸಿದರು.
ಈ ಸ್ಥಾವರ ನಿಶ್ಚಿತವಾಗಿಯೂ ಜಿಲ್ಲೆಗೆ ವರದಾನವಾಗಲಿದೆ ಎಂದು ರಾಜೇಶ್ ಅಯ್ಯಪ್ಪಸೂರ್ ತಿಳಿಸಿದರು.
ಗೋವರ್ಧನ ಗಿರಿ ಟ್ರಸ್ಟ್ ಸದಸ್ಯ ಹಾಗೂ ರಾಜ್ಯ ಪಶು ಸಂಗೋಪನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ. ಸರ್ವೋತ್ತಮ ಉಡುಪ ಮತ್ತು ಗೋ ಶಾಲೆಯ ವ್ಯವಸ್ಥಾಪಕ ನರಸಿಂಹ ಭಟ್ ತಜ್ಞರೊಂದಿಗಿದ್ದು, ಗೋ ಶಾಲೆಯ ಕುರಿತ ಸಮಗ್ರ ಮಾಹಿತಿ ನೀಡಿದರು. ವಾಸುದೇವ ಭಟ್ ಪೆರಂಪಳ್ಳಿ ಈ ಒಟ್ಟೂ ಯೋಜನೆ ಅನುಷ್ಠಾನದಲ್ಲಿ ಇಲಾಖೆಯೊಂದಿಗೆ ಸಂವಹನ ನಡೆಸುತ್ತಿದ್ದಾರೆ.
ಪೇಜಾವರಶ್ರೀ ಹರ್ಷ
ಗೋಮಯ ವಿದ್ಯುತ್ ಸ್ಥಾವರ ಯೋಜನೆಗೆ ಕೇಂದ್ರ ಸರಕಾರ ಮುಂದೆಬಂದಿರುವುದಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತಸ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಭಗವಂತ್ ಖೂಬಾ ಅವರಿಗೆ ಅಭಿನಂದನೆ ಸಲ್ಲಿದ್ದಾರೆ.
ಯೋಜನೆಯ ಅನುಷ್ಠಾನದಿಂದ ಜಿಲ್ಲೆಯಲ್ಲಿ ಗೋ ರಕ್ಷಣೆ ಕೆಲಸಕ್ಕೆ ವಿಶೇಷ ಪ್ರೋತ್ಸಾಹ ದೊರೆಯಲ್ಲಿದ್ದು, ಅದರ ಪ್ರಯೋಜನ ಜಿಲ್ಲೆಯ ಜನತೆಗೆ ಲಭಿಸಲಿರುವುದೂ ಅತ್ಯಂತ ಸಂತೋಷದ ವಿಚಾರ ಎಂದಿದ್ದಾರೆ