Sunday, October 2, 2022
Home ಸಮಾಚಾರ ಜಿಲ್ಲಾ ಸುದ್ದಿ ಜ. 24ರಂದು ನಂಚಾರಿನಲ್ಲಿ ಶ್ರೀಕಾಮಧೇನು ಗೋಶಾಲೆ ಮೊದಲ ಹಂತದ ಲೋಕಾರ್ಪಣೆ

ಜ. 24ರಂದು ನಂಚಾರಿನಲ್ಲಿ ಶ್ರೀಕಾಮಧೇನು ಗೋಶಾಲೆ ಮೊದಲ ಹಂತದ ಲೋಕಾರ್ಪಣೆ

ಸುದ್ದಿಕಿರಣ ವರದಿ
ಭಾನುವಾರ, ಜನವರಿ 23

ಜ. 24ರಂದು ನಂಚಾರಿನಲ್ಲಿ ಶ್ರೀಕಾಮಧೇನು ಗೋಶಾಲೆ ಮೊದಲ ಹಂತದ ಲೋಕಾರ್ಪಣೆ
ಉಡುಪಿ: ಬ್ರಹ್ಮಾವರ ತಾಲೂಕಿನ ನಂಚಾರಿನಲ್ಲಿ ಶ್ರೀಕಾಮಧೇನು ಗೋ ಶಾಲಾ ಮಹಾಸಂಘ ಟ್ರಸ್ಟ್ ವತಿಯಿಂದ ನಿರ್ಮಿಸಲಾಗುತ್ತಿರುವ ಗೋ ಶಾಲೆಯ ಮೊದಲ ಹಂತದ ಲೋಕಾರ್ಪಣೆ ಜನವರಿ 24ರಂದು ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಎನ್. ರಾಜೇಂದ್ರ ಚಕ್ಕೇರ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಕೃಪಾಶೀರ್ವಾದದೊಂದಿಗೆ ಗೋಪಾಲಕರಿಂದ ಗೋಪಾಲಕರಿಗಾಗಿ ಗೋಪಾಲಕರೇ ನಡೆಸುವ ಈ ಗೋ ಶಾಲೆಯಲ್ಲಿ ತಾತ್ಕಾಲಿಕವಾಗಿ 200 ಗೋವುಗಳಿಗೆ ಆಶ್ರಯ ಕಲ್ಪಿಸಲಾಗುವುದು. 3.92 ಕೋ. ರೂ. ವೆಚ್ಚದ ಕಟ್ಟಡ ನಿರ್ಮಾಣದ ಬಳಿಕ 1,150 ಗೋವುಗಳಿಗೆ ಆಶ್ರಯ ನೀಡಲುದ್ದೇಶಿಸಲಾಗಿದೆ ಎಂದರು.

ಜ. 24ರ ಅಂದು ಬೆಳಿಗ್ಗೆ 9.40 ಗಂಟೆಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ ಉದ್ಘಾಟಿಸುವರು.

ಶೃಂಗೇರಿ ಶ್ರೀ ಶಾರದಾಪೀಠದ ಆಡಳಿತಾಧಿಕಾರಿ ಗುರುಸೇವಾಧುರೀಣ ಪದ್ಮಶ್ರೀ ಡಾ| ವಿ. ಆರ್. ಗೌರಿಶಂಕರ್, ಆರ್.ಎಸ್.ಎಸ್. ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್, ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನಿಲ್ ಕುಮಾರ್, ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ. ಎಂ. ಸುಕುಮಾರ ಶೆಟ್ಟಿ ಮತ್ತು ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಮತ್ತು ದಕ್ಷಿಣ ಕನ್ನಡ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಉದ್ಯಮಿಗಳಾದ ಸುರೇಶ್ ಶೆಟ್ಟಿ ಗುರ್ಮೆ, ಉದಯ ಕುಮಾರ್ ಶೆಟ್ಟಿ ಮುನಿಯಾಲು ಮತ್ತು ಆನಂದ ಸಿ. ಕುಂದರ್ ಕೋಟ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಭಾಗ್ಯಲಕ್ಷ್ಮಿ ಮುರಳಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ಒಕ್ಕೂಟ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ನದೀಮ್ ಅಖ್ತರ್, ಡಾ. ಗಾಯತ್ರಿ ಮುತ್ತಪ್ಪ, ಚಂದ್ರಶೇಖರ ಶೆಟ್ಟಿ ಕರಡಿ, ಗಣೇಶ್ ಕಿಣಿ ಬೆಳ್ಳೆ, ರಾಜೇಂದ್ರ ಮಯ್ಯ, ಪ್ರಕಾಶ್ ನಾಯ್ಕ, ಪ್ರವೀಣ್ ಕುಮಾರ್ ಶೆಟ್ಟಿ, ಉಮೇಶ್ ಶೆಟ್ಟಿ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.

ಮಂಗಳೂರಿನ ಪಶುವೈದ್ಯ ಡಾ. ಮನೋಹರ ಉಪಾಧ್ಯ, ಉದ್ಯಮಿ ಹರೀಶ್ ಶ್ಯಾನುಭಾಗ್ ಕೊಕ್ಕರ್ಣೆ ಸಂಪನ್ಮೂಲವ್ಯಕ್ತಿಗಳಾಗಿದ್ದಾರೆ ಎಂದರು.

ಅನಾಥ, ಅಸಹಾಯಕ, ಅಪಘಾತಕ್ಕೀಕಾಡಾದ ಗೋವುಗಳನ್ನು ರಕ್ಷಿಸಿ ಸಲಹುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಗೋಮಯ, ಗೋಮೂತ್ರದಿಂದ ಕೃಷಿಗೆ ಬೇಕಾದ ಗೊಬ್ಬರ ತಯಾರಿಸಿ ಮಾರಾಟದಿಂದ ಬಂದ ಹಣವನ್ನು ಗೋವುಗಳ ಆಹಾರಕ್ಕೆ ಬಳಸಲಾಗುವುದು ಎಂದು ಚಕ್ಕೇರ ವಿವರಿಸಿದರು.

ಗೋ ಶಾಲೆ ಆವರಣದಲ್ಲಿ ಸುಸಜ್ಜಿತ ಗೋ ಆಸ್ಪತ್ರೆ, ಪಶು ಆಹಾರ ತಯಾರಿಕಾ ಘಟಕ, ಕಾರ್ಮಿಕ ವಸತಿ ಸಮುಚ್ಛಯ, ಸಾವಯವ ಗೊಬ್ಬರ ತಯಾರಿಕಾ ಘಟಕ ನಿರ್ಮಿಸಲುದ್ದೇಶಿಸಲಾಗಿದೆ. ಒಟ್ಟಾರೆ 15 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ. ಪರಿಸರದ 15ರಿಂದ 20 ಎಕರೆ ಜಾಗದ ಖರೀದಿಗೂ ಉದ್ದೇಶಿಸಲಾಗಿದೆ ಎಂದರು.

ಈಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವ ಅಕ್ರಮ ಗೋಸಾಗಾಟ, ಗೋಹತ್ಯೆ ಇತ್ಯಾದಿಗಳನ್ನು ತಡೆಯಲು ಜನಸಾಮಾನ್ಯರೂ ಗೋಶಾಲೆ ನಿರ್ಮಿಸಬೇಕು. ಸಾವಯವ ಕೃಷಿಯತ್ತ ಸಮಾಜ ಮುಖ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಮಕೃಷ್ಣ ಆಚಾರ್ಯ ಕೋಟ, ಶ್ರೀಕಾಂತ ಶೆಟ್ಟಿ ವಂಡಾರು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!