Friday, January 28, 2022
Home ಸಮಾಚಾರ ರಾಜ್ಯ ವಾರ್ತೆ ಬಿಜೆಪಿ ಸರ್ಕಾರದಲ್ಲೂ ಗೋಹತ್ಯೆ ನಿಂತಿಲ್ಲ: ಸಚಿವ ಈಶ್ವರಪ್ಪ ಬೇಸರ

ಬಿಜೆಪಿ ಸರ್ಕಾರದಲ್ಲೂ ಗೋಹತ್ಯೆ ನಿಂತಿಲ್ಲ: ಸಚಿವ ಈಶ್ವರಪ್ಪ ಬೇಸರ

ಬಿಜೆಪಿ ಸರ್ಕಾರದಲ್ಲೂ ಗೋಹತ್ಯೆ ನಿಂತಿಲ್ಲ: ಸಚಿವ ಈಶ್ವರಪ್ಪ ಬೇಸರ

ಮಣಿಪಾಲ, ಡಿ. 1 (ಸುದ್ದಿಕಿರಣ ವರದಿ): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಗೋ ಹತ್ಯೆ, ಗೋಕಳ್ಳತನ ನಿಂತಿಲ್ಲ. ಸಚಿವನಾಗಿ ಈ ವಿಚಾರದಲ್ಲಿ ನನಗೂ ತುಂಬಾ ತುಂಬಾ ಬೇಸರವಿದೆ.

ಈ ಮಾತನ್ನು ಹೇಳಿದವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ.

ಬಿಜ್ಜವಳ್ಳಿ ಘಟನೆಯಲ್ಲಿ ತೀವ್ರ ಗಾಯಗೊಂಡು ಇಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಲು ಬುಧವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸುದ್ದಿಗಾರೊಂದಿಗೆ ಮಾತನಾಡಿದರು.

ಗಾಯಾಳುಗಳಿಗೆ ನೆರವು
ಬಜರಂಗದಳ ಕಾರ್ಯಕರ್ತರಾದ ಗಾಯಾಳುಗಳಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹಿಂದೂ ಸಂಘಟನೆ ಮತ್ತು ಸರ್ಕಾರ ಗಾಯಾಳುಗಳಿಗೆ ನೆರವು ನೀಡುತ್ತದೆ.

ಅವರ ಕುಟುಂಬದಿಂದ ಗಾಯಾಳುಗಳಿಗೆ ಒಂದು ಪೈಸೆಯೂ ಖರ್ಚಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಪೊಲೀಸರಿಗೂ ಭಯ
ಗೋವು ಹಂತಕರಿಗೆ ಭಯ ಹುಟ್ಟಿಸಲು ಕಾನೂನು ಜಾರಿಗೆ ತಂದಿದ್ದೇವೆ. ಶಾಸನ ಭಯ ಹುಟ್ಟಿಸಲು ಸಮರ್ಥವಾಗಿದೆ. ಆದರೆ, ಪೊಲೀಸ್ ಇಲಾಖೆ ಇನ್ನಷ್ಟು ಬಿಗಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ, ಗೋವು ಹಂತಕರನ್ನು ತಡೆಯಲು ಪೊಲೀಸರಿಗೂ ಭಯ ಇದೆ. ತಮ್ಮ ಕುಟುಂಬದ ಜೊತೆ ಜೀವ ಭಯದಿಂದ ಕೆಲಸ ಅವರು ಮಾಡಬೇಕಾಗುತ್ತದೆ. ಆದರೂ ಪೊಲೀಸ್ ಇಲಾಖೆಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಕಾಯ್ದೆ ಗಟ್ಟಿ ಇಲ್ಲ ಎಂದಾದರೆ ಮತ್ತೆ ಬಿಗಿಗೊಳಿಸುತ್ತೇವೆ ಎಂದರು.

ಈರ್ವರು ಆರೋಪಿಗಳ ಬಂಧನ
ಬಿಜೆಪಿಯವರು ಗೋವನ್ನು ತಾಯಿ ಸಮಾನವಾಗಿ ನೋಡುತ್ತಾರೆ. ಪ್ರವಾಸದ ಒತ್ತಡದ ನಡುವೆಯೂ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ. ಘಟನೆ ಸಂಬಂಧ ಇಬ್ಬರು ಆರೋಪಿಗಳ ಬಂಧನವಾಗಿದೆ. 19 ಹಸುಗಳ ರಕ್ಷಣೆಯಾಗಿದೆ. ಅಕ್ರಮ ಮುಂದುವರಿಸಿದಲ್ಲಿ ನಾವು ಅಂಥವರನ್ನು ಬಲಿ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಗೋಹಂತಕರಿಗೆ ಬಲೆ
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿದ್ದರೂ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನ ಇದೆ ಎಂದ ಸಚಿವ ಈಶ್ವರಪ್ಪ, ನನ್ನ ಹೆಂಡತಿ ಮಕ್ಕಳಿಗೆ ಏನಾದರು ಮಾಡಿದ್ರೆ ಏನು ಎಂಬ ಭಯ ಪೊಲೀಸರನ್ನೂ ಕಾಡುತ್ತಿದೆ.

ಬಿಜೆಪಿ ಸರ್ಕಾರ ಬಂದರೂ ರಾಜ್ಯದಲ್ಲಿ ಗೋಹತ್ಯೆ ನಿಂತಿಲ್ಲ. ಇದನ್ನೆಲ್ಲ ನೋಡುವಾಗ ನನಗೆ ಹೊಟ್ಟೆ ಉರಿಯುತ್ತಿದೆ. ಸಂಪೂರ್ಣವಾಗಿ ಗೋಹತ್ಯೆ ನಿಲ್ಲಿಸಲು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಗೋಹತ್ಯೆ ಮಾಡುವವರಿಗೆ ಬಲೆ ಹಾಕುತ್ತೇವೆ, ಬಲಿ ತೆಗೆದುಕೊಳ್ಳುತ್ತೇವೆ. ನಾನು ಹಿಂದೊಂದು ಮುಂದೊಂದು ಇಲ್ಲ. ಗೃಹ ಸಚಿವರ ಜೊತೆ ಚರ್ಚಿಸಿ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!