Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಗೋಹತ್ಯೆ ನಿಷೇಧ ಕಾನೂನು ಪರಿಣಾಮಕಾರಿ ಅನುಷ್ಠಾನ

ಗೋಹತ್ಯೆ ನಿಷೇಧ ಕಾನೂನು ಪರಿಣಾಮಕಾರಿ ಅನುಷ್ಠಾನ

ಗೋಹತ್ಯೆ ನಿಷೇಧ ಕಾನೂನು ಪರಿಣಾಮಕಾರಿ ಅನುಷ್ಠಾನ

ಉಡುಪಿ, ಡಿ. 12 (ಸುದ್ದಿಕಿರಣ ವರದಿ): ರಾಜ್ಯದಲ್ಲಿ ಈಗಾಗಲೇ ಆಸ್ತಿತ್ವಕ್ಕೆ ಬಂದಿರುವ ಗೋಹತ್ಯೆ ನಿಷೇಧ ಕಾನೂನನ್ನು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪಶು ಸಂಗೋಪನಾ ಖಾತೆ ಸಚಿವ ಪ್ರಭು ಚವ್ಹಾನ್ ಹೇಳಿದರು.

ಅದಮಾರು ನರಹರಿತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪ್ರಿಯ ಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ ವಿಶ್ವಾರ್ಪಣಮ್ ಕಾರ್ಯಕ್ರಮದ 8ನೇ ದಿನವಾದ ಭಾನುವಾರ ಆಯೋಜಿಸಲಾದ ರಾಜ್ಯ ಮಟ್ಟದ ಗೋಪಾಲಕ, ಕೃಷಿಕ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ತಾಲೂಕಿಗೊಂದರಂತೆ ಆ್ಯಂಬುಲೆನ್ಸ್
ಗೋ ನಿಷೇಧ ಕಾಯ್ದೆ ಹಾಗೂ ಗೋ ಹಂತಕರಿಗೆ ವಿಧಿಸಲಾದ ಶಿಕ್ಷೆ ಸಂಬಂಧ ಕೆಲವರು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದು ಗೋವಿನ ಪರವಾಗಿ ತೀರ್ಪು ಬರುವ ನಿರೀಕ್ಷೆ ಇದೆ.

ಅಕ್ರಮ ಗೋ ಸಾಗಾಟ ಮತ್ತು ಗೋ ವಧೆ ಹಿನ್ನೆಲೆಯಲ್ಲಿ ಈಗಾಗಲೇ 500ಕ್ಕೂ ಅಧಿಕ ಕೇಸು ದಾಖಲಿಸಲಾಗಿದ್ದು ಸುಮಾರು 10 ಸಾವಿರ ಗೋವುಗಳನ್ನು ರಕ್ಷಿಸಲಾಗಿದೆ ಎಂದರು.

ಅನಾರೋಗ್ಯಪೀಡಿತ ಗೋವುಗಳ ಚಿಕಿತ್ಸೆಗೆ ಪೂರಕವಾಗಿ ಪ್ರತೀ ತಾಲೂಕಿಗೆ ಒಂದರಂತೆ ಆ್ಯಂಬುಲೆನ್ಸ್ ಸೇವೆ ಒದಗಿಸಲಾಗುತ್ತಿದ್ದು ರಾಜ್ಯದಲ್ಲಿ 275 ಆ್ಯಂಬುಲೆನ್ಸ್ ಕಾರ್ಯಾಚರಿಸುತ್ತಿವೆ.

ಜಿಲ್ಲೆಗೊಂದರಂತೆ ಗೋಶಾಲೆ ನಿರ್ಮಾಣ ಮಾಡಲಾಗುತ್ತಿದ್ದು ಖಾಸಗಿ ಗೋಶಾಲೆ ನಿರ್ವಹಿಸುವವರಿಗೆ ಪ್ರತೀ ಗೋವಿಗೆ ತಲಾ 12 ರೂ. ನೀಡಲಾಗುತ್ತಿದ್ದು ಈ ಮೊತ್ತ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.

ಈಗಾಗಲೇ ರಾಜ್ಯದಲ್ಲಿ ಪ್ರಾಣಿ ಸಹಾಯ ಕೇಂದ್ರ ಆರಂಭಿಸಲಾಗಿದ್ದು, ದಿನದ 24 ಗಂಟೆಯೂ ಅದು ಕಾರ್ಯನಿರ್ವಹಿಸುತ್ತಿದೆ ಎಂದರು.

ಮಾರ್ಗದರ್ಶಕ ಮಂಡಳಿ ಅಗತ್ಯ
ಅಭ್ಯಾಗತರಾಗಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಗೋಪಾಲಕ ಕೃಷ್ಣನ ನಾಡಿನಲ್ಲಿ ಗೋ ಪಾಲಕರ ಸಮ್ಮೇಳನ ನಡೆಯುತ್ತಿರುವುದು ಸಂತಸದಾಯಕ. ಪರ್ಯಾಯ ಅದಮಾರು ಶ್ರೀಪಾದರು ದೇಸೀ ಗೋ ತಳಿ ರಕ್ಷಣೆ ಬಗ್ಗೆ ಆಸಕ್ತಿ ತೋರುತ್ತಿರುವುದು ಸಂತೋಷದಾಯಕ ಎಂದರು.

ಸರಕಾರ ಜಿಲ್ಲೆಗೊಂದರಂತೆ ಗೋಶಾಲೆ ನಿರ್ಮಿಸುತ್ತಿರುವುದು ಸಂತೋಷದಾಯಕ. ಅಂಥ ಗೋಶಾಲೆಗಳಿಗೆ ಅನುದಾನ, ನಿರ್ವಹಣೆ ಇತ್ಯಾದಿಗಳಿಗೆ ತೊಂದರೆಯಾಗದಂತೆ ಮಾರ್ಗದರ್ಶಕ ಮಂಡಳಿ ನೇಮಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಈಗಾಗಲೇ ಖಾಸಗಿ ಸಂಸ್ಥೆಗಳು ಹಾಗೂ ಮಠ ಮಂದಿರಗಳು ಗೋಶಾಲೆ ನಿರ್ಮಿಸಿದ್ದು, ಅವುಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಸರ್ವರ ಸಹಕಾರ ಅಗತ್ಯ
ಸಾನ್ನಿಧ್ಯ ವಹಿಸಿದ್ದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಭಾರತೀಯ ಸಂಸ್ಕೃತಿ ಗೋವಿಗೆ ಮಾತೆಯ ಸ್ಥಾನ ಕಲ್ಪಿಸಿದೆ. ಗೋ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು.

ಗೋಶಾಲೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಯುವಜನತೆಯಲ್ಲಿ ಗೋಪ್ರೇಮ
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಗೋವು ಕೂಡಾ ಒಂದು ಸಂಪತ್ತು ಎಂಬ ಅರಿವನ್ನು ಯುವಜನತೆಯಲ್ಲಿ ಮೂಡಿಸಬೇಕು. ಗೋವಿನ ಮಹತ್ವ, ಆರೋಗ್ಯ ರಕ್ಷಣೆಯಲ್ಲಿ ಗೋ ಉತ್ಪನ್ನಗಳ ಪಾತ್ರ ಇತ್ಯಾದಿಗಳ ಬಗ್ಗೆ ತಿಳಿವಳಿಕೆ ಮೂಡಿಸುವುದರೊಂದಿಗೆ ಗೋ ಸಾಕಣೆಯಲ್ಲಿ ಯುವಜನತೆ ಮುಂದೆಬರಬೇಕು.

ಪ್ರತಿಯೊಂದು ಮನೆಯಲ್ಲಿಯೂ ಕನಿಷ್ಟ ಒಂದು ದನವನ್ನು ಸಾಕುವಂತಾಗಬೇಕು ಎಂದು ಆಶಿಸಿದರು.

ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್, ದ.ಕ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ, ಗೋಸೇವಾ ಗತಿವಿಧಿಯ ಪ್ರವೀಣ ಸರಳಾಯ, ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿ ಡಾ. ಭಾಸ್ಕರ ನಾಯಕ್, ಜಿಲ್ಲಾ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಶಂಕರ್ ಶೆಟ್ಟಿ ಮೊದಲಾದವರಿದ್ದರು.

ಪರ್ಯಾಯ ಅದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿ, ವಿಶ್ರಾಂತ ಸಂಸ್ಕೃತ ಉಪನ್ಯಾಸಕ ಪ್ರೊ. ರಮೇಶ್ ಭಟ್ ನಿರೂಪಿಸಿದರು.

ಗೋಪೂಜೆ
ಕಾರ್ಯಕ್ರಮಕ್ಕೂ ಮುನ್ನ ಗೋಪೂಜೆ ನಡೆಸಲಾಯಿತು. ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಸಚಿವ ಪ್ರಭು ಚವ್ಹಾಣ್, ಶಾಸಕ ರಘುಪತಿ ಭಟ್ ಮೊದಲಾದವರಿದ್ದರು.

ವೀಕ್ಷಣೆ
ರಾಜ್ಯದ ವಿವಿಧೆಡೆಗಳಿಂದಾಗಮಿಸಿದ ಗೋ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಸಚಿವ ಚವ್ಹಾಣ್ ವೀಕ್ಷಿಸಿದರು.

ವಿಚಾರಗೋಷ್ಠಿ
ಈ ಸಂದರ್ಭದಲ್ಲಿ ಆಯೋಜಿಸಲಾದ ವಿಚಾರಗೋಷ್ಠಿಯಲ್ಲಿ ಗೋ ಚಿಕಿತ್ಸೆ ಕುರಿತು ಕರ್ನಾಟಕ ಉತ್ತರ ಪ್ರಾಂತ ಗೋ ಚಿಕಿತ್ಸಾ ಪ್ರಮುಖರಾದ ರಾಮು ಗಟ್ಕೋಡಿ ಹಾಗೂ ಈಶ್ವರ ನಂಜನಗೂಡು ಉಪನ್ಯಾಸ ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!