Wednesday, July 6, 2022
Home ಸಮಾಚಾರ ಗ್ರಾಮಸ್ಥರ ಸಮಾವೇಶ

ಗ್ರಾಮಸ್ಥರ ಸಮಾವೇಶ

ಕಾರ್ಕಳ: ಇಲ್ಲಿನ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈರ್ಲಬೆಟ್ಟು ಶಾಲೆ ಬಳಿ ಈಚೆಗೆ ನಡೆದ ಗ್ರಾಮಸ್ಥರ ಸಮಾವೇಶವನ್ನು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಉದ್ಘಾಟಿಸಿದರು.

ಗ್ರಾಮ ಪಂಚಾಯತ್ ಗಳು ನಿಜಾರ್ಥದ ಜನರ ಸರಕಾರ. ತಮ್ಮದೇ ವಾರ್ಡಿನ ಸದಸ್ಯರೊಬ್ಬರನ್ನು ಜನರು ತಮ್ಮ ಸರಕಾರದ ಪ್ರತಿನಿಧಿಯಾಗಿ ಆಯ್ಕೆ ಮಾಡುವ ಅವಕಾಶವಿದು. ಮಹಾತ್ಮ ಗಾಂಧಿ ಆಶಯದ ಗ್ರಾಮ ಸ್ವರಾಜ್ಯದ ಕಲ್ಪನೆಯ ರಾಮ ರಾಜ್ಯ ನಿರ್ಮಾಣದ ತಳಹದಿಯಾಗಿತ್ತು. ಸರಕಾರ, ದೇಶದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದು ಗ್ರಾಮ ಪಂಚಾಯತ್ ಮೂಲಕ. ಹಾಗಾಗಬೇಕಾದರೆ ನಮ್ಮ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮೋತ್ಥಾನದ ನಿಜ ರಾಯಭಾರಿಗಳಾಗಬೇಕು ಎಂದವರು ಹೇಳಿದರು.

ಪಂ| ದೀನದಯಾಳ್ ಉಪಾಧ್ಯಾಯರ ಅಂತ್ಯೋದಯ ಕಲ್ಪನೆಯ ಸಾಕಾರ ಬಿಜೆಪಿ ನೇತೃತ್ವದ ಸರಕಾರ ಸಾಧಿಸುತ್ತಿದೆ. ಈ ಕೆಲಸಕ್ಕೆ ಇನ್ನಷ್ಟು ವೇಗ ತುಂಬಲು ಮುಂದಿನ ಚುನಾವಣೆಯಲ್ಲಿ ನಮ್ಮ ಗ್ರಾಮಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದಲ್ಲಿ ಅಭಿವೃದ್ಧಿಯ ಯಾತ್ರೆ ಮುಂದುವರಿಯಲು ಸಾಧ್ಯ. ಆ ಮೂಲಕ ಗ್ರಾಮೋದ್ಧಾರದೊಂದಿಗೆ ರಾಷ್ಟ್ರೋದ್ಧಾರದ ಕನಸು ಸಾಕಾರಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆ ಕೇವಲ ಅಭ್ಯರ್ಥಿಗಳ ಆಯ್ಕೆಯ ಚುನಾವಣೆಯಲ್ಲ. ಮುಂದಿನ 5 ವರ್ಷಲ್ಲಿ ನಮ್ಮ ಹಳ್ಳಿಯ ಅಭಿವೃದ್ಧಿಯ ಪಥ ನಿರ್ಧಾರದ ಚುನಾವಣೆ, ರಾಮರಾಜ್ಯ ನಿರ್ಮಾಣದ ಸಂಕಲ್ಪದ ಚುನಾವಣೆ. ಈ ಹಿನ್ನಲೆಯಲ್ಲಿ ಈ ಬಾರಿಯ ಗ್ರಾ. ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನೇ ಗೆಲ್ಲಿಸೋಣ ಎಂದು ಉದಯಕುಮಾರ್ ಶೆಟ್ಟಿ ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಮಡಿವಾಳ, ಬೈಲೂರು ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಅಶೋಕ್ ಶೆಟ್ಟಿ, ಶಕ್ತಿಕೇಂದ್ರ ಅಧ್ಯಕ್ಷ ಸಚೀಂದ್ರ ನಾಯ್ಕ್, ಕುಕ್ಕುಂದೂರು ಗ್ರಾ. ಪಂ. ಮಾಜಿ ಅಧ್ಯಕ್ಷ ಅಂತೋನಿ ಡಿ’ಸೋಜ, ಸ್ಥಾನೀಯ ಸಮಿತಿ ಅಧ್ಯಕ್ಷ ಪ್ರಸಾದ್ ಐಸಿರಿ, ಪ್ರಮುಖರಾದ ಭರತ್ ಶೆಟ್ಟಿ, ಯೋಗೀಶ್ ಸಾಲ್ಯಾನ್, ತ್ರಿವಿಕ್ರಮ ಕಿಣಿ, ಗುರುರಾಜ್ ಮಾಡ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!