ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 11, 2022
ಚಂಪಾ ಅಗಲಿಕೆಗೆ ಕಂಬನಿ
ಉಡುಪಿ: ಕನ್ನಡದ ಹಿರಿಯ ಸಾಹಿತಿ, ಜನಪರ ಚಳುವಳಿಯ ಹರಿಕಾರ ಚಂದ್ರಶೇಖರ ಪಾಟೀಲ (ಚಂ.ಪಾ.) ಅಗಲಿಕೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಂಪಾ ಎಂದೇ ಗುರುತಿಸಿಕೊಂಡಿದ್ದ ಚಂದ್ರಶೇಖರ ಪಾಟೀಲ್, ಕರ್ನಾಟಕ ಜನಪರ ಚಳವಳಿಯ ಉಸಿರಾಗಿದ್ದರು. ಸಾಹಿತ್ಯ, ಪತ್ರಿಕೋದ್ಯಮ, ಹೋರಾಟ ಮೊದಲಾದ ಕ್ಷೇತ್ರಗಳಲ್ಲಿ ಅಪೂರ್ವ ಸೇವೆ ಸಲ್ಲಿಸಿದ್ದ ಅವರು ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದರು.
ಕರ್ನಾಟಕದ ದಲಿತ ಚಳುವಳಿಗಳಿಗೆ ಒಂದು ಹೊಸ ಸ್ಪರ್ಷ ನೀಡಿದ್ದ ಚಂಪಾ, ಶೋಷಿತ ಸಮುದಾಯಗಳ ದನಿಯಾಗಿದ್ದರು. ಕೋಮುವಾದ, ಜಾತಿ ದೌರ್ಜನ್ಯ, ತಾರತಮ್ಯದ ವಿರುದ್ಧ ನಡೆಯುತ್ತಿದ್ದ ಹೋರಾಟಗಳಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿದ್ದರು. ಸಂಘಪರಿವಾರ ಪ್ರತಿಪಾದಿಸುವ ಹಿಂದುತ್ವ ರಾಷ್ಟ್ರೀಯ ವಾದದ ಟೀಕಾಕಾರರೂ ಆಗಿದ್ದರು.
ಚಂಪಾ ಚಿಂತನೆಗಳು, ವ್ಯವಸ್ಥೆಯೊಂದಿಗೆ ರಾಜಿಯಾಗದ ನಿಲುವುಗಳು, ಯುವ ತಲೆಮಾರಿಗೆ ಅವರು ನೀಡಿದ ಮಾರ್ಗದರ್ಶನಗಳು ಎಂದೂ ಜೀವಂತವಾಗಿರಬೇಕು. ಚಂಪಾ ಮೊಳಗಿಸಿದ ಶೋಷಿತರ ಪರವಾದ ಗಟ್ಟಿ ಧ್ವನಿಯನ್ನು ಮುಂದಕ್ಕೆ ಕೊಂಡೊಯ್ಯಬೇಕಾದ ಹೊಣೆಗಾರಿಕೆ ನಾಡಿನ ಜನರ ಮೇಲಿದೆ ಎಂದು ಯಾಸಿರ್ ಹಸನ್ ಹೇಳಿದ್ದಾರೆ.