ಸುದ್ದಿಕಿರಣ ವರದಿ
ಬುಧವಾರ, ಜುಲೈ 20
ಚಾಕಲೇಟ್ ನುಂಗಿದ ಬಾಲಕಿ ಸಾವು
ಕುಂದಾಪುರ: ತರಾತುರಿಯಲ್ಲಿ ಪ್ಲಾಸ್ಟಿಕ್ ಕವರ್ ಸಹಿತ ಚಾಕಲೇಟು ಬಾಯಿಗೆ ಹಾಕಿಕೊಂಡ ಬಾಲಕಿಯೋರ್ಳಳು ಶಾಲಾ ವಾಹನ ಬಂತೆಂದು ನುಂಗಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ ಖೇದಕರ ಘಟನೆ ಬಿಜೂರು ಸಮೀಪದ ಬವಳಾಡಿ ಎಂಬಲ್ಲಿ ಬುಧವಾರ ಸಂಭವಿಸಿದೆ.
ಬೈಂದೂರು ತಾಲೂಕಿನ ಬಿಜೂರು ಗ್ರಾಮದ ನಿವಾಸಿ ಸುಪ್ರೀತಾ ಪೂಜಾರಿ ಎಂಬುವರ ಮಗಳು, ಸ್ಥಳೀಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಸಮನ್ವಿ (6) ಸಾವನ್ನಪ್ಪಿದ ದುರ್ದೈವಿ ಬಾಲಕಿ.
ಸ್ಥಳೀಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ಸಮನ್ವಿ ಬುಧವಾರ ಬೆಳಿಗ್ಗೆ ಶಾಲೆಗೆ ತೆರಳುವ ಸಮಯದಲ್ಲಿ ಹಠ ಹಿಡಿದಿದ್ದು, ಮಗಳನ್ನು ಸಮಾಧಾನಿಸಲು ತಾಯಿ ಚಾಕಲೇಟು ನೀಡಿದ್ದರು.
ಶಾಲೆಗೆ ತೆರಳುವ ತರಾತುರಿಯಲ್ಲಿ ಕವರ್ ಸಮೇತವಾಗಿ ಚಾಕಲೇಟು ತಿಂದ ಪರಿಣಾಮ ಚಾಕಲೇಟು ಬಾಲಕಿ ಸಮನ್ವಿಯ ಗಂಟಲೊಳಗೆ ಸಿಲುಕಿಕೊಂಡು ತೀವ್ರವಾಗಿ ಅಸ್ವಸ್ಥಗೊಂಡಿದ್ದಳು.
ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿತಾದರೂ ಅಷ್ಟರಲ್ಲೇ ಬಾಲಕಿ ಕೊನೆಯುಸಿರೆಳೆದಿದ್ದಳು.
ಮಗುವಿನ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲಕ್ಕೆ ಕರೆದೊಯ್ಯಲಾಗಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.