ಉಡುಪಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ಬಸವರಾಜ ಬೊಮ್ಮಾಯಿ ಕೈಗೊಂಡಿರುವ ಚೊಚ್ಚಲ ಜನಪರ ನಿರ್ಣಯ ಜನಸಾಮಾನ್ಯರ ಜೊತೆಗೆ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ತಳೆದ ನಿರ್ಣಯದಂತೆ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ 1,000 ಕೋ. ಹೆಚ್ಚುವರಿ ವೆಚ್ಚದ ನೂತನ ಶಿಷ್ಯ ವೇತನ ಯೋಜನೆ ಜಾರಿಯಾಗಲಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ರೂ. 1,000ದಿಂದ ರೂ. 1,200ಕ್ಕೆ ಹೆಚ್ಚಳವಾಗಿದ್ದು, 35.98 ಲಕ್ಷ ಫಲಾನುಭವಿಗಳಿಗೆ ಲಾಭವಾಗಲಿದೆ. ಮಾಸಿಕ ವಿಧವಾ ವೇತನ ರೂ. 600ರಿಂದ ರೂ. 800ಕ್ಕೆ ಹೆಚ್ಚಳವಾಗಲಿದ್ದು, 17.25 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ. ದಿವ್ಯಾಂಗರ ಮಾಸಿಕ ವೇತನ ರೂ. 600ರಿಂದ ರೂ. 800ಕ್ಕೆ ಹೆಚ್ಚಳವಾಗಲಿದ್ದು, 3.66 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಬಡವರು, ದೀನದಲಿತರು ಮತ್ತು ರೈತರ ಮಕ್ಕಳ ಶ್ರೇಯೋಭಿವೃದ್ಧಿಯ ಚಿಂತನೆಯಿಂದ ಜಾರಿಗೆ ತರಲಿರುವ ವಿವಿಧ ಜನಕಲ್ಯಾಣ ಯೋಜನೆಗಳಿಗೆ ನಾಂದಿ ಹಾಡಿರುವುದು ಶ್ಲಾಘನೀಯ ಎಂದು ಕುಯಿಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.