Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಬಸ್ ದರ ಏರಿಕೆ ಮೂಲಕ ಜನಸಾಮಾನ್ಯರ ಸುಲಿಗೆ

ಬಸ್ ದರ ಏರಿಕೆ ಮೂಲಕ ಜನಸಾಮಾನ್ಯರ ಸುಲಿಗೆ

ಉಡುಪಿ: ಖಾಸಗಿ ಬಸ್ ದರವನ್ನು ಶೇ. 25ರಷ್ಟು ಏರಿಸುವ ಮೂಲಕ ಜನಸಾಮಾನ್ಯರ ಸುಲಿಗೆ ಮಾಡಲಾಗುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಹೇಳಿಕೆ ನೀಡಿ, ಕೋವಿಡ್ ಲಾಕ್ ಡೌನ್ ಮೊದಲು ಖಾಸಗಿ ಬಸ್ ಟಿಕೆಟು ದರ 13 ರೂ. ಇದ್ದದ್ದು ಮೊದಲ ಅಲೆ ನಂತರ 50 ಶೇ. ಪ್ರಯಾಣಿಕರಿಗೆ ಅವಕಾಶ ನೀಡಿ ಓಡಿಸಿದಾಗ 20 ರೂ. ಆಯಿತು. ಲಾಕ್ ಡೌನ್ ತೆರವಾದಾಗಲೂ ಇಂಧನ ಬೆಲೆ ಏರಿಕೆ ನೆಪವೊಡ್ಡಿ ಯಾವುದೇ ಬಸ್ ನವರೂ ಟಿಕೆಟು ದರವನ್ನು ಮೊದಲಿನ ದರಕ್ಕೆ ಇಳಿಸಲಿಲ್ಲ.

ಇದೀಗ ಕೋವಿಡ್ ಎರಡನೇ ಅಲೆಯ ಲಾಕ್ ಡೌನ್ ಸಡಿಲಿಕೆ ಆದಾಗ ಮತ್ತೆ 50 ಶೇ. ಪ್ರಯಾಣಿಕರಿಗೆ ಬಸ್ ನಲ್ಲಿ ಅವಕಾಶ ನೀಡಿ ಶೇ. 25ರಷ್ಟು ಟಿಕೆಟು ದರ ಹೆಚ್ಚಿಸುವ ಸರಕಾರದ ನಿರ್ಧಾರ ಖಂಡನೀಯ ಎಂದಿದ್ದಾರೆ.

ಕೆಲವೇ ತಿಂಗಳಲ್ಲಿ 2 ಬಾರಿ ಬಸ್ ದರ ಏರಿಸುವುದು ಕಾನೂನು ಪ್ರಕಾರ ಸರಿಯೇ? ಕಳೆದೆರಡು ವರ್ಷದಿಂದ ಖಾಸಗಿ ಬಸ್ ದರ ಸುಮಾರು 100 ಶೇ. ಜಾಸ್ತಿಯಾದಂತಾಗುತ್ತದೆ. 13 ರೂ. ಇದ್ದ ದರ ಇದೀಗ 25 ರೂ. ಆಗುವ ಸಾಧ್ಯತೆ ಇದೆ. ಬಸ್ ಮಾಲಿಕರಿಂದ ತೆರಿಗೆ ಪಡೆಯುವಾಗ ಅದರಲ್ಲಿ ನಿರ್ದಿಷ್ಟ ಮೊಬಲಗನ್ನು ಕಾದಿರಿಸಿ ಪ್ರಕೃತಿ ವಿಕೋಪ ಯಾ ಇಂಧನ ಬೆಲೆ ಮಿತಿ ಮೀರಿದಾಗ ಬಳಸುವ ಡೀಸೆಲ್ ಗೆ ಸಬ್ಸಿಡಿ ನೀಡಿ ಸರಕಾರ ಸಹಾಯ ಮಾಡಬೇಕು. ಅಲ್ಲದೆ 2 ಲಾಕ್ ಡೌನ್ ಅವಧಿಯಲ್ಲಿ ಕಟ್ಟಬೇಕಾದ ತೆರಿಗೆ ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಲಾಕ್ ಡೌನ್ ಅವಧಿಯ ಬಸ್ ಸಾಲದ ಬಡ್ಡಿ ಸಂಪೂರ್ಣ ಮನ್ನಾ ಮಾಡಬೇಕು. ಬಸ್ ಚಾಲಕರು ಹಾಗೂ ನಿರ್ವಾಹಕರು ಸಂಕಷ್ಟದಲ್ಲಿದ್ದು, ಅವರ ಖಾತೆಗೆ ಕನಿಷ್ಟ 10 ಸಾವಿರ ರೂ. ಸರಕಾರ ವರ್ಗಾಯಿಸುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.

ಬಸ್ ಮಾಲಕರು, ಚಾಲಕರು ಹಾಗೂ ನಿರ್ವಾಹಕರಿಗೆ ಸರಕಾರ ಯಾವುದೇ ಆರ್ಥಿಕ ನೆರವು ನೀಡದೇ 2 ಲಾಕ್ ಡೌನ್ ಮುಕ್ತಾಯ ಸಂದರ್ಭದಲ್ಲಿಯೂ ಬಸ್ ದರ ಏರಿಸುವ ಮೂಲಕ ಪೆಟ್ರೋಲ್, ಗ್ಯಾಸ್, ದಿನಸಿ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರ ಸುಲಿಗೆ ಮಾಡುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಉಪಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ನಗರಸಭೆ ವಿರೋಧ ಪಕ್ಷ ನಾಯಕ ರಮೇಶ್ ಕಾಂಚನ್, ನಗರಸಭಾ ಸದಸ್ಯ ವಿಜಯ ಪೂಜಾರಿ, ಬ್ಲಾಕ್ ಎಸ್.ಸಿ. ಘಟಕ ಅಧ್ಯಕ್ಷ ಗಣೇಶ್ ನೆರ್ಗಿ, ನಗರಸಭಾ ಮಾಜಿ ಸದಸ್ಯರಾದ ಶಶಿರಾಜ್ ಕುಂದರ್, ಸುಕೇಶ್ ಕುಂದರ್ ಆಗ್ರಹಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!